ತುಮಕೂರು :

      ಜಿಲ್ಲೆಯು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಹಿಂದುಳಿದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ್ ಅವರು ತೀವ್ರ ಅಸಮಧಾನ ವ್ಯಕ್ತಪಡಿಸಿದರು.

      ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿಂದು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರ್.ಸಿ.ಹೆಚ್., ಜನನಿ ಸುರಕ್ಷಾ, ಎನ್‍ಯುಹೆಚ್‍ಎಂ, ಕೆಪಿಎಂಇ ಮತ್ತು ಪಿಸಿಪಿಎನ್‍ಡಿಟಿ, ಐಸಿಟಿಸಿ ಚಟುವಟಿಕೆಗಳ ಅನುಷ್ಠಾನದಲ್ಲಿ ಜಿಲ್ಲೆಯು ಹಿಂದುಳಿದಿದ್ದು, ಇನ್ನಾದರೂ ಪ್ರಗತಿ ಸಾಧಿಸುವಲ್ಲಿ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಸೂಚಿಸಿದರು.

      ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲು ವಾರದೊಳಗೆ ಕ್ರಮ ಕೈಗೊಳ್ಳಬೇಕೆಂದು ಡಿಹೆಚ್‍ಓ ಅವರಿಗೆ ತಾಕೀತು ಮಾಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು 2016ರಲ್ಲಿಯೇ ಸರ್ಕಾರದಿಂದ ಅನುಮೋದನೆ ನೀಡಿದ್ದರೂ ಈವರೆವಿಗೂ ಕಾರ್ಯಗತವಾಗಿಲ್ಲವೆಂದು ಬೇಸರ ವ್ಯಕ್ತಪಡಿಸಿದ ಅವರು, ಎಲ್ಲಾ ತಾಲ್ಲೂಕು ಆರೋಗ್ಯ ಕೇಂದ್ರಗಳಲ್ಲಿ ಕನಿಷ್ಠ 5 ತಜ್ಞ ವೈದ್ಯರನ್ನು ನೇಮಿಸಬೇಕೆಂದರು.

      ಇಲಾಖೆಗೆ ಸಂಬಂಧಿಸಿದ ಅಪೂರ್ಣಗೊಂಡ ಕಟ್ಟಡಗಳನ್ನು ಕೂಡಲೇ ಪೂರ್ಣಗೊಳಿಸಿ ಹಸ್ತಾಂತರಿಸಬೇಕೆಂದು ಸಂಬಂಧಿಸಿದ ಇಂಜಿನಿಯರ್‍ಗಳಿಗೆ ಸೂಚಿಸಿದ ಅವರು, ಆರೋಗ್ಯಪೂರ್ಣ ರಾಜ್ಯವನ್ನಾಗಿ ನಿರ್ಮಿಸಲು ಇಲಾಖೆಯ ಎಲ್ಲಾ ಅಧಿಕಾರಿ/ ಸಿಬ್ಬಂದಿಗಳಿಗೆ ಅಗತ್ಯ ತರಬೇತಿ ನೀಡಬೇಕು. ಸಮರ್ಪಕವಾಗಿ ಕಾರ್ಯನಿರ್ವಹಿಸದ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳಿಗೆ ವೇತನವನ್ನು ಸ್ಥಗಿತಗೊಳಿಸಬೇಕು. ಕರ್ತವ್ಯ ನಿರ್ವಹಿಸದ ವೈದ್ಯಾಧಿಕಾರಿಗಳನ್ನು ಕ್ಲಿನಿಕಲ್ ಸೇವೆಗಾಗಿ ನಿಯೋಜಿಸಲಾಗುವುದೆಂದು ಎಚ್ಚರಿಕೆ ನೀಡಿದರಲ್ಲದೆ ಅಂತಹ ವೈದ್ಯರನ್ನು ಕೂಡಲೇ ಅಮಾನತ್ತಿನಲ್ಲಿಡಲು ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅವರಿಗೆ ಸೂಚಿಸಿದರು.

      ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಖಾಲಿಯಿರುವ ಹುದ್ದೆಗಳಿಗೆ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕು. ಯಾವುದೇ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳಿಂದ ಹಣ ವಸೂಲಿ ಮಾಡಿದವರ ವಿರುದ್ದ 24 ಗಂಟೆಯೊಳಗೆ ಶಿಸ್ತು ಕ್ರಮ ಜರುಗಿಸಬೇಕು. ಪಾವಗಡ ತಾಲ್ಲೂಕಿನಲ್ಲಿ ನೀರಿನಿಂದ ಉಂಟಾಗುವ ಫ್ಲೋರೋಸಿಸ್ ರೋಗದ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಹಾಗೂ ಜನಪ್ರತಿನಿಧಿಗಳಿಗೆ ಅರಿವು ಮೂಡಿಸಲು ಕಾರ್ಯಾಗಾರಗಳನ್ನು ಏರ್ಪಡಿಸಬೇಕು ಹಾಗೂ ಕುಡಿಯುವ ನೀರಿನಲ್ಲಿ ಆರ್.ಓ.ಪ್ಲಾಂಟ್‍ಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

      ವೈದ್ಯರು ಇಚ್ಛಾಶಕ್ತಿಯಿಂದ ಕರ್ತವ್ಯ ನಿರ್ವಹಿಸಿದರೆ ಮಾತ್ರ ರೋಗಿಗಳು ಮತ್ತು ವೈದ್ಯರ ನಡುವೆ ಉತ್ತಮ ಬಾಂಧ್ಯವ ಹೊಂದಲು ಸಾಧ್ಯ. ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನವನ್ನು ವ್ಯರ್ಥ ಮಾಡದೇ ಅಪೌಷ್ಠಿಕ ಮಕ್ಕಳಿಗೆ ಎನ್‍ಆರ್‍ಸಿ ಕೇಂದ್ರದಲ್ಲಿ ಚಿಕಿತ್ಸೆ ನೀಡಿ, ಸಾಮಾನ್ಯ ಮಕ್ಕಳನ್ನಾಗಿ ರೂಪಿಸಬೇಕು ಎಂದು ತಿಳಿಸಿದರು.

      ಜಿಲ್ಲೆಯಲ್ಲಿ ಸಿಜೇರಿಯನ್ ಮೂಲಕ ಮಾಡುವ ಹೆರಿಗೆಗಳ ಸಂಖ್ಯೆಯನ್ನು ಇಳಿಮುಖಗೊಳಿಸಬೇಕು. ಮಧುಗಿರಿ ತಾಲೂಕಿನ ದೊಡ್ಡೇರಿ ಹಾಗೂ ಬಡವನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಲ್ಲಾ ಪ್ರಕರಣಗಳಲ್ಲಿಯೂ ಸಿಜೇರಿಯನ್ ಇಲ್ಲದೆ ಸ್ವಾಭಾವಿಕ ಹೆರಿಗೆ ಮಾಡಿಸಲು ಶ್ರಮಿಸಿರುವ ಆಶಾ ಕಾರ್ಯಕರ್ತೆಯರು ಹಾಗೂ ವೈದ್ಯಾಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದರು.

      ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಚಂದ್ರಿಕಾ ಮಾತನಾಡಿ, ಬೇರೆ ಜಿಲ್ಲೆಗೆ ಹೊಲಿಸಿದರೆ ನಮ್ಮ ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ ಕಡಿಮೆಯಿದ್ದು, ಮುಂದಿನ ದಿನಗಳಲ್ಲಿ ಯಾವುದೇ ದೋಷವಿಲ್ಲದೆ ಕರ್ತವ್ಯವನ್ನು ನಿಭಾಯಿಸುತ್ತೇವೆ.  ನ್ಯೂನ್ಯತೆಗಳಿದ್ದರೆ ಸರಿಪಡಿಸಿಕೊಳ್ಳುತ್ತೇವೆ ಎಂದು ಸಚಿವರಿಗೆ ಮನವಿ ಮಾಡಿದರು.

       ಜಿಲ್ಲಾ ಚಿಕಿತ್ಸಕ ಡಾ||ವೀರಭದ್ರಯ್ಯ ಮಾತನಾಡಿ ಜಿಲ್ಲಾಸ್ಪತ್ರೆಯಲ್ಲಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರಲ್ಲದೆ, ಎಲ್ಲರ ಸಹಕಾರದಿಂದ “ಹಸಿರು ಉದ್ಯಾನವನವನ್ನು ಆರಂಭಿಸಿದ್ದೇವೆ. ನರ್ಸಿಂಗ್ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ, ಸಮಸ್ಯೆಯಿರುವ ಕೆಲವು ಲ್ಯಾಬ್‍ಗಳಿಗೆ ಕೊಠಡಿಯ ವ್ಯವಸ್ಥೆ, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಸಚಿವರಿಗೆ ಮನವಿ ಮಾಡಿದರು.

      ರಾಜ್ಯ ಕಾರ್ಯಕ್ರಮಗಳ ಅಧಿಕಾರಿ ರಾಜ್‍ಕುಮಾರ್ ಮಾತನಾಡಿ ಆರೋಗ್ಯ ಇಲಾಖೆ ಅಧಿಕಾರಿಗಳು, ಮತ್ತ ಸಚಿವರಿಂದ ಮಾರ್ಗದರ್ಶನ ಪಡೆದುಕೊಂಡು ಎಮ್‍ಸಿಹೆಚ್ ವಿಂಗ್‍ನ್ನು ಸ್ಥಾಪಿಸಬೇಕು ಎಂದು ತಿಳಿಸಿದರು.

      ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಪ್ರೇಮ್‍ಕುಮಾರ್, ಆರ್‍ಸಿಹೆಚ್ ಅಧಿಕಾರಿ ಡಾ: ಕೇಶವ್ ರಾಜ್, ಮಲೇರಿಯಾ ನಿಯಂತ್ರಣಾಧಿಕಾರಿ ಡಾ: ಪುರುಷೋತ್ತಮ್, ಕ್ಷಯರೋಗ ನಿಯಂತ್ರಣಾಧಿಕಾರಿ ಡಾ: ಸನತ್, ಡಾ: ಚೇತನ್, ಡಾ: ವೀಣಾ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನ ಎನ್.ಟಿ.ಅಬ್ರೋ, ಮತ್ತಿತರರು ಉಪಸ್ಥಿತರಿದ್ದರು.

(Visited 18 times, 1 visits today)