ತುಮಕೂರು:
ಶರಣರ ಜೀವನ, ಮೌಲ್ಯಗಳು ಹಾಗೂ ವಚನಗಳು ಕುರಿತು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಬುಧವಾರ ನಗರದ ಟೌನ್‍ಹಾಲ್ ವೃತ್ತದಲ್ಲಿ ಸಹಮತ ವೇದಿಕೆ ವತಿಯಿಂದ ಸಾಣೆಹಳ್ಳಿ ತರಳಬಾಳು ಶಾಖಾ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಮತ್ತೆ ಕಲ್ಯಾಣ ಕಾರ್ಯಕ್ರಮದ ‘ಸಾಮರಸ್ಯ ನಡಿಗೆ’ಗೆ ವಿವಿಧ ಮಠಾಧೀಶರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳು ಮಾತನಾಡಿ, ಇಂದು ನಾಡಿನಾದ್ಯಂತ ಮತ್ತೆ ಕಲ್ಯಾಣ ವಿಶಿಷ್ಠ ಕಾರ್ಯಕ್ರಮವನ್ನು ಪಂಡಿತಾರಾಧ್ಯ ಸ್ವಾಮಿಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದು, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಾಮರಸ್ಯದ ನಡೆ, ಸಂವಾದ ಮತ್ತು ಚಿಂತನೆಗಳನ್ನು ಬಿತ್ತುವುದರ ಮುಖಾಂತರ ಬಸವಾದಿ ಶರಣರ ತತ್ವಗಳು ಜನಮನಸ್ಸಿಗೆ ಬಿತ್ತಬೇಕು ಎಂಬ ಉದ್ಧೇಶವನ್ನಿಟ್ಟುಕೊಂಡು ಈ ಪವಿತ್ರ ಕಾರ್ಯ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ಇಂದಿನ ಆಧುನಿಕ ಕಾಲ ಘಟ್ಟದಲ್ಲಿ ನಮ್ಮೆಲ್ಲಾ ಸಮಸ್ಯೆಗಳ ಪರಿಹಾರ ಶರಣರ ತತ್ವಗಳಿಂದ ಮಾತ್ರ ಸಾಧ್ಯ ಎಂಬುದನ್ನು ನಾವು ಎಂದೂ ಮರೆಯಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಪೂಜ್ಯ ಶ್ರೀಗಳು ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಕಲ್ಯಾಣ ಎಂದರೆ ಬೇರೇನೂ ಅಲ್ಲ, ವ್ಯಕ್ತಿ ಮತ್ತು ಸಮಸ್ಯೆಯ ಹಿತವನ್ನು ಕಾಪಾಡುವಂತಹದ್ದು, ಪ್ರತಿಯೊಬ್ಬ ವ್ಯಕ್ತಿಯ ಬದುಕನ್ನು ಹಸನುಗೊಳಿಸುವಂತಹದ್ದು, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ನಮ್ಮ ಕೂಡಲ ಸಂಗಮೇಶ ಎನ್ನುವ ಹಾಗೆ ಎಲ್ಲರಿಗೆ ಹಿತವನ್ನು ಎಲ್ಲರಿಗೆ ಸುಖವನ್ನು ಎಲ್ಲರಿಗೆ ಸಂತೋಷವನ್ನು ಬಯಸುವಂತಹದ್ದು ಈ ಕಲ್ಯಾಣದ ಪವಿತ್ರ ಕಾರ್ಯಕ್ರಮ.
ನಾವು ನಮ್ಮ ಆತ್ಮ ಕಲ್ಯಾಣವನ್ನು ಮಾಡಿಕೊಳ್ಳಬೇಕು, ಆ ಮೂಲಕ ಜಗತ್ತಿನ ಕಲ್ಯಾಣವನ್ನು ಮಾಡುವುದಕ್ಕೆ ಸಾಧ್ಯವಾಗುತ್ತದೆ. ಇದಕ್ಕೆ ಬೇಕಾಗಿರುವುದು ಅಂತರಂಗ ಬಹಿರಂಗ ಶುದ್ಧಿ ಅಷ್ಟೇ ಬೇರೇನೂ ಅಲ್ಲ, ನಮ್ಮ ಅಂತರಂಗವನ್ನು ಬಹಿರಂಗವನ್ನು ಶುದ್ಧವಾಗಿಟ್ಟುಕೊಂಡರೆ ಆತ್ಮಕಲ್ಯಾಣವೂ ಆಗುತ್ತದೆ, ಲೋಕ ಕಲ್ಯಾಣವೂ ಆಗುತ್ತದೆ. ಇದಕ್ಕಾಗಿ ಶರಣ ತತ್ವಗಳು ಚಿಂತನೆಗಳು ಪ್ರತಿಯೊಬ್ಬ ವ್ಯಕ್ತಿಗೂ ಅವಶ್ಯಕವಾಗಿ ಬೇಕಾಗಿವೆ.
ನಮ್ಮ ಜೀವನವನ್ನು ಹಸನುಮಾಡಿಕೊಳ್ಳುವುದಕ್ಕೆ, ನಮ್ಮ ಜೀವನವನ್ನು ಪವಿತ್ರಮಾಡಿಕೊಳ್ಳುವುದಕ್ಕೆ , ನಮ್ಮ ಜೀವನವನ್ನು ಸಾರ್ಥಕಮಾಡಿಕೊಳ್ಳಲು ಶರಣರ ತತ್ವಗಳು ಅವಶ್ಯಕವಾಗಿವೆ ಎಂದರು.
ರಾಮಕೃಷ್ಣ ವಿವೇಕಾನಂದ ಆಶ್ರಮದ ಮುಖ್ಯಸ್ಥರಾದ ಡಾ.ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಜನಸಾಮಾನ್ಯನನ್ನು ಮುಖ್ಯವಾಹಿನಿಗೆ ತರುವ ವಿಷಯದಲ್ಲಿ ಪ್ರತಿಯೊಬ್ಬರನ್ನೂ ಧಾರ್ಮಿಕವಾಗಿ, ಆಧ್ಯಾತ್ಮಿಕವಾಗಿ ತರುವ ನಿಟ್ಟಿನಲ್ಲಿ 12ನೇ ಶತಮಾನದ ಚಳುವಳಿ ಜಗತ್ತು ಕಂಡಂತಹ ಮಹಾನ್ ಪರ್ವತ. ಅದನ್ನು ನಾವು ಕೃತಜ್ಞತೆಯಿಂದ ನೆನಪು ಮಾಡಿಕೊಳ್ಳಬೇಕು, ಬಸವೇಶ್ವರರ ಈ ಕ್ರಾಂತಿ ಸಾಮಾನ್ಯನನ್ನು ಮುಖ್ಯವಾಹಿನಿಗೆ ತಂದಂತಹ ಒಂದು ಮಹಾನ್ ಪಥ ಎಂದರು.
ಸಮಾಜ ತಾಮ್ರದ ಪಾತ್ರೆಯಿದ್ದಂತೆ, ಬೆಳಗಿದಾಗ ಬಂಗಾರದಂತೆ ಕಾಣುತ್ತದೆ. ಮಾರನೆ ದಿನಕ್ಕೆ ಕಿಲುಬು ಹಿಡಿಯುತ್ತದೆ. ಹಾಗಾಗಿ ಮತ್ತೆ ಮತ್ತೆ ಮಹಾತ್ಮರ ಚಿಂತನೆಗಳನ್ನು ನೆನಪು ಮಾಡಿಕೊಳ್ಳುತ್ತಿದ್ದಾಗ ಎಲ್ಲಿಯವರೆಗೂ ತಾಮ್ರದ ಪಾತ್ರೆ ಚಿನ್ನದ್ದಾಗುವುದಿಲ್ಲವೋ ಅಲ್ಲಿಯವರೆಗೂ ಬೆಳಗುತ್ತಿರಬೇಕು ಎಂದು ರಾಮಕೃಷ್ಣ ಪರಮ ಹಂಸರು ಹೇಳುತ್ತಾರೆ. ಸಾಮಾನ್ಯ ಮನುಷ್ಯ ಮಹಾತ್ಮರಾಗುವುದಕ್ಕೆ ಶರಣರ ತತ್ವಗಳು, ಚಿಂತನೆಗಳನ್ನು ಅಳವಡಿಸಕೊಳ್ಳಬೇಕಾಗಿದೆ ಎಂದು ಹೇಳಿದರು. ಮತ್ತೆ ಕಲ್ಯಾಣ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸಾಣೆಹಳ್ಳಿ ತರಳಬಾಳು ಶಾಖಾ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಸಮಾಜದಲ್ಲಿನ ಅಜ್ಞಾನ, ಮೂಢನಂಬಿಕೆ, ಲಿಂಗತಾರತಮ್ಯ, ಭ್ರಷ್ಟಾಚಾರ, ಶೋಷಣೆಯಿಂದ ಜನರು ಮುಕ್ತವಾಗಲು ಎಚ್ಚರಿಸುವುದು, ಶರಣರ ಅರಿವಿನ ಮಾರ್ಗ ಮತ್ತು ಆಶಯಗಳನ್ನು ಇಂದಿನ ಪೀಳಿಗೆಗೆ ತಿಳಿಸುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು.
ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಬದುಕು ನೇರ, ನಿಷ್ಠುರ, ಸರಳವಾಗಿರಬೇಕು. 12 ನೆಯ ಶತಮಾನದಲ್ಲಿದ್ದ ಅಸಮಾನತೆಗಳನ್ನು ವಚನಕಾರರು ತೊಡೆದು ಹಾಕುವ ಪ್ರಯತ್ನ ಮಾಡಿದ್ದರು. ವಚನಕಾರರು ಅಳವಡಿಸಿಕೊಂಡಿದ್ದ ಸೂತ್ರಗಳನ್ನು ನಾವೂ ಅಳವಡಿಸಿಕೊಂಡರೆ ಭಗವಂತ ಖಂಡಿತ ನಮಗೂ ಒಲಿಯುವನು ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಹಾನಗರಪಾಲಿಕೆ ಮೇಯರ್ ಲಲಿತಾ ರವೀಶ್ ಮಾತನಾಡಿ, ಸಾಣೆಹಳ್ಳಿ ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಶ್ರೀಗಳ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಮತ್ತೆ ಕಲ್ಯಾಣ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಕೋರಿದರು.
ಸಹಮತ ವೇದಿಕೆ ಮತ್ತೆ ಕಲ್ಯಾಣ ಕಾರ್ಯಕ್ರಮದ ವ್ಯವಸ್ಥಾಪನಾ ಸಮಿತಿ ಉಪಾಧ್ಯಕ್ಷರಾದ ಎಸ್.ನಾಗಣ್ಣ ಮಾತನಾಡಿ, ನಕಾರಾತ್ಮಕ ಅಂಶಗಳನ್ನು ಸಕಾರಾತ್ಮಕವಾಗಿ ಬದಲಾಯಿಸಿಕೊಂಡು ಸುಸ್ಥಿರ ಸಮಾಜಕಟ್ಟಬೇಕೆನ್ನುವವರು ನಾವು. ಮತ್ತೆ ಕಲ್ಯಾಣ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರ ಪರಿಶ್ರಮವಿದೆ. ಈ ಕಲ್ಯಾಣ ಯಶಸ್ವಿಯಾಗಲು ಎಲ್ಲರ ಸಹಕಾರ ಅತ್ಯಗತ್ಯ ಎಂದರು.
ಕಾರ್ಯಕ್ರಮದಲ್ಲಿ ಚಿಕ್ಕತೊಟ್ಲುಕೆರೆ ಅಟವೀ ಸುಕ್ಷೇತ್ರದ ಶ್ರೀ ಅಟವೀ ಶಿವಲಿಂಗ ಸ್ವಾಮೀಜಿ, ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ತಿಪಟೂರು ಗುರುಕುಲಾಶ್ರಮದ ಇಮ್ಮಡಿ ಕರಿಬಸವೇಶ್ವರ ರಾಜೇಂದ್ರ ಸ್ವಾಮೀಜಿ, ಕಾಗಿನೆಲೆ ಮಹಾಸಂಸ್ಥಾನ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಜಾಮಿಯಾ ಮಸೀದಿಯ ಮೌಲಾನಾ ಮಹಮ್ಮದ್ ಉಮರ್ ಅನ್ಸಾರಿ ಮಾತನಾಡಿದರು.
ಸಹಮತ ವೇದಿಕೆ ಮತ್ತೆ ಕಲ್ಯಾಣ ಕಾರ್ಯಕ್ರಮ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಟಿ.ಬಿ.ಶೇಖರ್, ಕಾರ್ಯದರ್ಶಿ ಜಿ.ಎಸ್.ಸೋಮಶೇಖರ್, ಸದಸ್ಯರಾದ ಡಿ.ಎನ್.ಯೋಗೀಶ್ವರಪ್ಪ, ಹೆಚ್.ಎನ್.ರಾಜಶೇಖರ್, ಬಸವರಾಜು, ಹೆಚ್.ಎನ್.ಗಂಗಾಧರ್, ಸಿದ್ಧಗಂಗಮ್ಮ, ಸುರೇಶ್, ಜಿಲ್ಲಾ ವಕ್ಫ್ ಬೋರ್ಡ್ ಛೇರ್ಮೆನ್ ಮುಷ್ತಾಕ್ ಅಹಮದ್, ವೆಸ್ಲಿ ಚರ್ಚ್‍ನ ಪಾಸ್ಟರ್ ರೆವರೆಂಡ್ ಎಲೀಷ್ ದೇವಾನಂದ ಮುಂತಾದವರು ಭಾಗವಹಿಸಿದ್ದರು. ಸಾಮರಸ್ಯ ನಡಿಗೆಯು ವಿವಿಧ ಕಲಾಮೇಳಗಳೊಂದಿಗೆ ನಗರದ ಟೌನ್‍ಹಾಲ್ ವೃತ್ತದಿಂದ ಸಿದ್ಧಿವಿನಾಯಕ ಸಮುದಾಯ ಭವನದವರೆಗೂ ಸಾಗಿತು. ಈ ಸಾಮರಸ್ಯ ನಡಿಗೆಯಲ್ಲಿ ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.