ತುಮಕೂರು :
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಫೆಬ್ರುವರಿ 16 ಮತ್ತು 17ರಂದು ನಡೆಯಲಿರುವ ತುಮಕೂರು-ಚಿತ್ರದುರ್ಗ ಜಿಲ್ಲೆಗಳ ಬೃಹತ್ ಉದ್ಯೋಗ ಮೇಳದಲ್ಲಿ ಪ್ಲೇಸ್‍ಮೆಂಟ್ ಯೋಜನೆಗಳಿಗೆ ಭಾಗವಹಿಸಲು ಅವಕಾಶವಿಲ್ಲ ಎಂದು ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಆಯುಕ್ತೆ ಜಿ.ಸತ್ಯವತಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ಮೇಳದ ಸಿದ್ಧತೆ ಬಗ್ಗೆ ಪರಿಶೀಲನಾ ಸಭೆ ನಡೆಸಿದ ಅವರು, ಈಗಾಗಲೇ ಆನ್‍ಲೈನ್ ಮೂಲಕ 17,500 ಉದ್ಯೋಗಾಕಾಂಕ್ಷಿಗಳು ನೋಂದಾಯಿಸಿಕೊಂಡಿದ್ದು, ನೋಂದಣಿ ಸಂಖ್ಯೆ 20,000ಕ್ಕೆ ತಲುಪುವ ಸಾಧ್ಯತೆ ಇದೆ. ಮೇಳದಲ್ಲಿ ಹೆಚ್ಚಿನ ಜನಸಂದಣಿ ಉಂಟಾಗದಂತೆ ಮಳಿಗೆಗಳ ನಡುವೆ ಅಂತರವಿರುವಂತೆ ನಿರ್ಮಿಸಬೇಕು. ಉದ್ಯೋಗಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಅಗತ್ಯ ಕುಡಿಯುವ ನೀರು, ಶೌಚಾಲಯ, ಮಧ್ಯಾಹ್ನದ ಭೋಜನ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಮಳಿಗೆಗಳ ಬಳಿ ಮಧ್ಯಾಹ್ನದ ಹೊತ್ತಿನಲ್ಲಿ ಬಿಸಿಲು ಬೀಳದಂತೆ ನೆರಳಿನ ವ್ಯವಸ್ಥೆ ಮಾಡಬೇಕು. ಮೇಳದಲ್ಲಿ ಎರಡೂ ಜಿಲ್ಲೆಗಳ ಉದ್ಯೋಗಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಪಡೆಯುವಂತಾಗಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದರು.
ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ಮಾತನಾಡಿ, ನೋಂದಣಿಯಾದ ಉದ್ಯೋಗಾರ್ಥಿಗಳಿಗೆ ಇಂದು ನೋಂದಣಿ ಖಚಿತವಾಗಿರುವ ಬಗ್ಗೆ ಎಸ್‍ಎಂಎಸ್ ಸಂದೇಶವನ್ನು ರವಾನಿಸಲಾಗುವುದು. ಮೇಳದಲ್ಲಿ ಭಾಗವಹಿಸಲು ಈಗಾಗಲೇ 105 ಕಂಪನಿಗಳ ಉದ್ಯೋಗದಾತರು ಆನ್‍ಲೈನ್ ಮೂಲಕ ನೋಂದಾಯಿಸಿಕೊಂಡಿದ್ದಾರೆ. ಇದಕ್ಕಾಗಿ 100ಕ್ಕೂ ಹೆಚ್ಚು ಮಳಿಗೆಗಳನ್ನು ಸೆಕ್ಟರ್‍ವಾರು ತೆರೆಯಲಾಗುವುದು. ಅಲ್ಲದೆ 15 ನೋಂದಣಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ನಂತರ ಅಧಿಕಾರಿಗಳು ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣಕ್ಕೆ ಭೇಟಿ ನೀಡಿ ಪೂರ್ವಸಿದ್ಧತೆ ಕೈಗೊಂಡಿರುವ ಬಗ್ಗೆ ಸ್ಥಳ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಕಾರ್ಮಿಕ ಆಯುಕ್ತ ಪಾಲಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಕೋನ ವಂಶಿಕೃಷ್ಣ, ಜಿಲ್ಲಾ ಪಂಚಾಯತಿ ಸಿಇಓ ಶುಭ ಕಲ್ಯಾಣ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಮತ್ತಿತರ ಅಧಿಕಾರಿಗಳು ಹಾಜರಿದ್ದು, ಮಾಹಿತಿ ನೀಡಿದರು.