ತುಮಕೂರು:
ಕುಡಿಯುವ ನೀರಿನ ಬೋರ್ವೆಲ್ನ ವಿದ್ಯುತ್ ಸಂಪರ್ಕದ ಆರ್.ಆರ್ (ರೆವೆನ್ಯೂ ರಿಜಿಸ್ಟಾರ್) ಸಂಖ್ಯೆಯನ್ನು ಕಡ್ಡಾಯವಾಗಿ ಬರೆಯಬೇಕು ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ರಮೇಶ್ ತಿಳಿಸಿದರು.
ಆಗಸ್ಟ್ 17 ಶನಿವಾರದಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರೆದಿದ್ದ ಜಿಲ್ಲೆಯ ಬೆಸ್ಕಾಂ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಭಿಯಂತರರು ಹಾಗೂ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳ ಸಮನ್ವಯ ಸಭೆಯಲ್ಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಕುಡಿಯುವ ನೀರಿನ ಬೋರ್ವೆಲ್ ವಿದ್ಯುತ್ ಸಂಪರ್ಕದ ಮೇಲೆ ಆರ್.ಆರ್. ಸಂಖ್ಯೆಯನ್ನು ಕಡ್ಡಾಯವಾಗಿ ಬರೆಯಬೇಕು. ಆರ್. ಆರ್. ಸಂಖ್ಯೆ ಇಲ್ಲದಿದ್ದರೆ ಕೂಡಲೇ ಅದನ್ನು ಬರೆಸುವ ವ್ಯವಸ್ಥೆ ಮಾಡಿ ಎಂದು ಬೆಸ್ಕಾಂ ಅಭಿಯಂತರರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ತುಮಕೂರು ತಾಲ್ಲೂಕು-6, ಕುಣಿಗಲ್-11 ತಿಪಟೂರು-3, ತುರುವೇಕೆರೆ-2, ಚಿಕ್ಕನಾಯಕನಹಳ್ಳಿ-1, ಮಧುಗಿರಿ-2, ಶಿರಾ-7, ಪಾವಗಡ-7 ತಾಲ್ಲೂಕುಗಳಿಂದ ಒಟ್ಟು 39 ಬೆಸ್ಕಾಂ ನ ಒಬಿ ಕೆಲಸ ಮಳೆ ಬಂದಿರುವ ಕಾರಣ ಬಾಕಿ ಇದೆ ಎಂದು ಸೂಪರಿಂಟೆಂಡೆಂಟ್ ಇಂಜಿನಿಯರ್ ಗೋವಿಂದಪ್ಪ ಅವರು ಸಭೆಯಲ್ಲಿ ತಿಳಿಸಿದರು.
ಗ್ರಾಮಗಳಲ್ಲಿ ಇರುವ ಕುಡಿಯುವ ನೀರಿನ ಸಮಸ್ಯೆಯನ್ನು ತಿಳಿಯಲು ತಾಲ್ಲೂಕು ಮಟ್ಟದಲ್ಲಿ 15 ದಿನಗಳಿಗೊಮ್ಮೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಭಿಯಂತರರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಸಭೆ ಕರೆದು ಬೋರ್ವೆಲ್ ಕೊರೆಸುವುದು, ನೀರಿನ ಪೈಪ್ಲೈನ್ ಹಾಗೂ ಶುದ್ದ ಕುಡಿಯುವ ನೀರಿನ ಘಟಕಗಳ ಕಾರ್ಯವೈಖರಿಯ ಬಗ್ಗೆ ಪರಿಶೀಲನೆ ನಡೆಸುವಂತೆ ಅವರು ಸೂಚಿಸಿದರು.
ಜಿಲ್ಲೆಯ ಹಾಗೂ ತಾಲ್ಲೂಕಿನ ಬೆಸ್ಕಾಂ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಭಿಯಂತರರು, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.