ಪಾವಗಡ :
ವಾಲ್ಮೀಕಿ ನಾಯಕ ಸಮುದಾಯದ ಶ್ರೀರಾಮುಲು ಅಥವಾ ರಮೇಶ್ ಜಾರಕಿಹೊಳಿರವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಓತ್ತಾಯಿಸಿ ವಾಲ್ಮೀಕಿ ನಾಯಕ ಜನಾಂಗದ ಸಂಸ್ಥೆಗಳು ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಮನವಿ ಪತ್ರ ಸಲ್ಲಿಸಿದರು.
ಇದೇ ವೇಳೆ ಮನವಿ ಪತ್ರ ಸಲ್ಲಿಸಿ ವಾಲ್ಮೀಕಿ ಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷರಾದ ಲೋಕೇಶ್ ಪಾಳ್ಳೆಗಾರ್ ಮಾತನಾಡಿ, ಯಡಿಯೂರಪ್ಪನವರು ಲಿಂಗಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಯಕ ಸಮುದಾಯಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ಮತ್ತು 3 ಶಾಸಕರಿಗೆ ಸಚಿವ ಸ್ಥಾನ ನೀಡುವುದಾಗಿ ತಿಳಿಸಿದ್ದು, ಇಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ನಾಯಕ ಸಮುದಾಯಕ್ಕೆ ಸೂಕ್ತ ಸ್ಥಾನ-ಮಾನ ನೀಡದೇ ಉಪ ಮುಖ್ಯಮಂತ್ರಿ ಸ್ಥಾನವೂ ನೀಡದೇ ಕಡೆಗಣಿಸಲಾಗಿದೆ ಎಂದರು.
ಕರ್ನಾಟಕ ರಾಜ್ಯಾದಾದ್ಯಂತ ನಾಯಕ ಮತ್ತು ಹಿಂದುಳಿದ ಸಮುದಾಯಗಳು ಕೂಡ ಒತ್ತಾಯಿಸಿ ಬೆಂಬಲ ಸೂಚಿಸುತ್ತಿದ್ದು, ರಾಜ್ಯದಲ್ಲಿ 70 ಲಕ್ಷ ನಾಯಕ ಸಮುದಾಯದ ಜನಾಂಗವಿದ್ದು, ರಾಜ್ಯದ ಮುಖ್ಯಮಂತ್ರಿಗಳು ಸಮುದಾಯದ ಮನವಿಯನ್ನು ಸ್ವೀಕರಿಸಿ ಮನ್ನಣೆ ನೀಡಿ ಜನಾಂಗಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ಮತ್ತು ಮೂರು ಸಚಿವ ಸ್ಥಾನ ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಹೋರಾಟ ಸಿದ್ದವಾಗುವುದಲ್ಲದೆ ಇಂತಹ ಮಾತಿಗೆ ತಪ್ಪುವ ಪಕ್ಷಗಳಿಗೆ ತಕ್ಕಪಾಠ ಕಲಿಸುವ ಪ್ರಯತ್ನ ಮಾಡಲಾಗುವುದೆಂದರು.
ಟೈಲರ್ ನಾರಾಯಣಪ್ಪ ಮಾತನಾಡಿ, ರಾಷ್ಟ್ರೀಯ ನಾಯಕರು ಹಾಗೂ ರಾಜ್ಯ ಮಟ್ಟದ ಬಿಜೆಪಿ ನಾಯಕರು ಸಮುದಾಯದ ಮನವಿಯನ್ನು ಚಾಚು ತಪ್ಪದೆ ಸ್ವೀಕರಿಸಿ ಸೂಕ್ತ ಸ್ಥಾನಮಾನ ನೀಡದಿದ್ದಲ್ಲಿ ಬಿಜೆಪಿ ಪಕ್ಷಕ್ಕೆ ವಾಲ್ಮೀಕಿ ಸಮುದಾಯ ತಕ್ಕಪಾಠ ಕಲಿಸಲಿದೆ ಎಂಬುದನ್ನು ಮರೆಯುವಂತಿಲ್ಲ ಮೀಸಲಾತಿಗೆ ಅನುಗುಣವಾಗಿ ಬೇಡಿಕೆ ಇಟ್ಟರೆ ಸರ್ಕಾರ ಉಳಿಯುವುದಿಲ್ಲ ಎಂಬುದನ್ನು ಯಾರೂ ಮರೆಯಬಾರದು. ಇಂದಿಗೂ ಸಾಮಾಜಿಕ ನ್ಯಾಯದಡಿ ಹೋರಾಟವಿದೆ ನಮ್ಮ ಹೋರಾಟ ಬೇರೆ ಮಾರ್ಗ ಹಿಡಿಯಬಾರದು ಎಂದರೆ ಶ್ರೀರಾಮುಲು ಅಥವಾ ರಮೇಶ್ ಜಾರಕಿಹೊಳಿರವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ ಎಂದರು.
ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಓಂಕಾರ್ ನಾಯಕ, ಬ್ಯಾಡನೂರು ಶಿವು, ಕೆ.ರಾಂಪುರ ಗೋಪಿ, ಬೇಕರಿ ನಾಗರಾಜು, ಆಟೋಸತ್ತಿ, ಶ್ರೀರಾಮಸೇನೆ ರಾಮಾಂಜಿ, ಈರಣ್ಣ, ಸಣ್ಣನರಸಿಂಹ, ಕಲ್ಯಾಣ್ ಉಪಸ್ಥಿತರಿದ್ದರು.