ತುರುವೇಕೆರೆ:
ಚಾಮರಾಜನಗರ ದಿಂದ ಜೇವರ್ಗಿಯವರೆಗೆ ಅಭಿವೃದ್ದಿಪಡಿಸಲು ಮುಂದಾಗಿರುವ ರಾಷ್ಟ್ರೀಯ ಹೆದ್ದಾರಿ ತುರುವೇಕೆರೆ ಪಟ್ಟಣದಲ್ಲಿಯೇ ಹಾದು ಹೋಗಬೇಕೆ ಹೊರತು ಬೈಪಾಸ್ ನಿರ್ಮಾಣವೆಂಬುದು ಅವೈಜ್ನಾನಿಕ ನಿರ್ಧಾರವಾಗಿದೆ ಎಂದು ಪರಿಸರ ತಜ್ನ ಡಾ:ಎ.ಎನ್.ಯಲ್ಲಪ್ಪರೆಡ್ಡಿ ಸರ್ಕಾರದ ಕ್ರಮವನ್ನು ಖಂಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫಲವತ್ತಾದ ಕೃಷಿ ಭೂಮಿಯಲ್ಲಿ ಹೆದ್ದಾರಿ ನಿರ್ಮಾಣ ಮಾಡುವುದೇ ಅಭಿವೃದ್ದಿ ಎನ್ನುವುದಾದರೆ, ಅಂಥಹ ಅಭಿವೃದ್ದಿ ನಮಗೆ ಅವಶ್ಯಕತೆಯಿಲ್ಲ, ರೈತರು ತಮ್ಮ ಜಮೀನುಗಳಲ್ಲಿ ಬೆಳೆಸುವ ಮರಗಳನ್ನು ತಮ್ಮ ಮಕ್ಕಳ ರೀತಿ ಪೋಷಿಸಿರುತ್ತಾರೆ, ಅಂತಹ ಅವಿನಾಭಾವ ಸಂಭಂದವನ್ನು ಅವರು ತಮ್ಮ ಜಮೀನಿನೊಡನೆ ಹೊಂದಿರುತ್ತಾರೆ, ಏಕಾ-ಏಕಿ ಕೇಂದ್ರದ ನಿರ್ಧಾರ ಅಥವಾ ರಾಜ್ಯದ ನಿರ್ಧಾರವೆಂದು ರೈತರಿಗೆ ನೋಟೀಸ್ ನೀಡಿ ವಶಪಡಿಸಿಕೊಂಡರೆ ಸಾಕಿ-ಸಲಹಿ ಶಿಕ್ಷಣಕೊಡಿಸಿದ ಮಕ್ಕಳನ್ನು ತನ್ನ ಕಣ್ಣ ಮುಂದೆಯೇ ಹತ್ಯೆಗೈದಂತಾಗುತ್ತದೆ ಇಂತಹ ಭಾವನಾತ್ಮಕ ಸಂಭಂಧ ಸರ್ಕಾರಕ್ಕೆ ಕಾಣುವುದಿಲ್ಲ.
ಬೈಪಾಸ್ ನಿರ್ಮಾಣ ಮಾಡಿದರೆ 850 ಎಕರೆ ಕೃಷಿ ಭೂಮಿಯನ್ನು ರೈತ ಕಳೆದುಕೊಳ್ಳುತ್ತಾನೆ, ರೈತರ ಜಮೀನುಗಳು ಇಬ್ಬಾಗವಾಗಿ ಅಭಿವೃದ್ದಿ ಹೊಂದಿ ಕಂಗೊಳಿಸುತ್ತಿರುವ ಜಮೀನುಗಳು ಪಾಳು ಬೀಳುವ ಹಂತಕ್ಕೆ ಬಂದು ನಿಲ್ಲುತ್ತವೆ, ಇಡೀ ವಿಶ್ವದಲ್ಲಿಯೇ ಅತ್ಯುತ್ತಮ ಬಯೋ ಇಂಜಿನ್ ಹೊಂದಿರುವ ಉತ್ಕøಷ್ಟ ಫಲವತ್ತಾದ ಜಮೀನು ಇದಾಗಿದ್ದು, ಇಲ್ಲಿ ಬೆಳೆದಿರುವ ತೆಂಗು, ಅಡಿಕೆ, ತೇಗದಂತಹ ಒಂದೊಂದು ಮರವೂ ಒಬ್ಬೊಬ್ಬ ಇಂಜಿನಿಯರ್, ಡಾಕ್ಟರ್‍ಗಳಿದ್ದ ಹಾಗೆ ಒಂದಿಂಚೂ ಭೂಮಿಯನ್ನು ಸಾಂವಿಧಾನಿಕವಾಗಿ ಬೈಪಾಸ್ ನಿರ್ಮಾಣಕ್ಕೆಂದು ಬಿಟ್ಟುಕೊಡಲು ನಾವು ಸಿದ್ದರಿಲ್ಲ. ಇಂದಿನಿಂದಲೇ ನಮ್ಮ ಹೋರಾಟ ಮುಂದುವರಿಯಲಿದೆ. ನಮ್ಮ ಹೋರಾಠ ಏನೇ ಇದ್ದರೂ ಕಾನೂನಿನ ಚೌಕಟ್ಟಿನಲ್ಲಿ ಮುಂದುವರಿಯುತ್ತದೆ, ರೈತರು ಬೈಪಾಸ್‍ಗೆ ಹೆದರುವ ಅವಶ್ಯಕತೆಯಿಲ್ಲ ಬೈಪಾಸ್ ನಿರ್ಮಾಣ ಮಾಡಬೇಕಾದರೆ ಅನುಸರಿಸುವ ಕಾನೂನುಗಳನ್ನು ಇಲ್ಲಿಯ ಅಧಿಕಾರಿಗಳು ಗಾಳಿಗೆ ತೂರಿದ್ದಾರೆ ಒಟ್ಟಾರೆ ಬೈಪಾಸ್ ಎನ್ನುವ ಅವೈಜ್ನಾನಿಕ ಯೋಜನೆಗೆ ಸರ್ಕಾರದ ರೈತ ವಿರೋಧಿ ಧೋರಣೆಗೆ ನನ್ನ ವಿರೋಧವಿದೆ ಎಂದರು.
ಹಿರಿಯ ರೈತ ಹೋರಾಟಗಾರ ಅರಳೀಕೆರೆ ಶಿವಯ್ಯ ಮಾತನಾಡಿ ಅಭಿವೃದ್ದಿ ಹೆಸರಿನಲ್ಲಿ ನಿಸರ್ಗವನ್ನು ಹಾಳು ಮಾಡುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ, ಕೇರಳ ಹಾಗೂ ಕೊಡಗಿನಲ್ಲಾದ ದುರಂತ ಕಣ್ಣ ಮುಂದೆಯೇ ಇದ್ದರೂ, ನಮಗೂ ಇದಕ್ಕೂ ಸಂಭಂದವಿಲ್ಲದವರಂತೆ ರೈತರ ಫಲವತ್ತಾದ ಜಮೀನನ್ನ ಕಸಿಯಲು ಮುಂದಾಗಿದ್ದಾರೆ ಇಂದು ಬೈಪಾಸ್ ನಿರ್ಮಾಣ ಮಾಡಲು ಮುಂದಾಗುತ್ತಿರುವುದರ ಹಿಂದೆ ಮಾಜಿ ಶಾಸಕರುಗಳ ಸ್ವಹಿತಸಕ್ತಿ ಅಡಗಿದೆ ಅವರ ವಯಕ್ತಿಕ ಸ್ವಾರ್ಥಕ್ಕಿಂದು ನೂರಾರು ರೈತರು ಕೃಷಿ ಜಮೀನನ್ನು ಕಳೆದುಕೊಳ್ಳುವ ಹಂತಕ್ಕೆ ಬಂದು ನಿಂತಿದೆ ಎಂದು ಕಿಡಿಕಾರಿದರು.
ಇದಕ್ಕೂ ಮುಂಚೆ ಅರಳೀಕೆರೆ, ಮುನಿಯೂರು, ಮಾದಿಹಳ್ಳಿ ಸೇರಿದಂತೆ ವಿವಿಧ ಗ್ರಾಮದ ರೈತರ ಜಮೀನುಗಳಿಗೆ ಪರಿಸರ ತಜ್ನ ಡಾ:ಎ.ಎನ್.ಯಲ್ಲಪ್ಪರೆಡ್ಡಿ ಭೇಟಿ ನೀಡಿ ಫಲವತ್ತತೆ ಪರಿಷೀಲಿಸಿದರು.
ಈ ಸಂಧರ್ಭದಲ್ಲಿ ಶಿವಲಿಂಗಯ್ಯ, ವಿಜಯನಂದಸ್ವಾಮಿ, ವಕೀಲ ಎಸ್.ಚಂದ್ರಣ್ಣ, ಮಾದಿಹಳ್ಳಿ ಗ್ರಾ.ಪಂ.ಅಧ್ಯಕ್ಷ ಬೊಮ್ಮಲಿಂಗಯ್ಯ, ಮಾಜಿ ಗ್ರಾ.ಪಂ.ಅಧ್ಯಕ್ಷ ಶಿವನಂಜಪ್ಪ, ಅರಳೀಕೆರೆ ರಾಮೇಗೌಡ ಇತರರು ಇದ್ದರು.