ತುಮಕೂರು :
ಜನರಲ್ ಕಾರಿಯಪ್ಪ ರಸ್ತೆ ಕಾಮಗಾರಿಗೆ ಕಾರ್ಯಾದೇಶ ನೀಡಿ ಈಗಾಗಲೇ 10 ತಿಂಗಳು ಕಳೆದಿದ್ದರೂ ಸಹ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದ್ದು, ಯಾವುದೇ ಪ್ರಗತಿ ಹೊಂದಿರುವುದಿಲ್ಲ. ಇನ್ನೊಂದು ವಾರದೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ಗುತ್ತಿಗೆದಾರರೊಂದಿಗೆ ಮಾಡಿಕೊಂಡಿರುವ ಕರಾರು ಒಪ್ಪಂದವನ್ನು ಅಂತಿಮಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ|| ಶಾಲಿನಿ ರಜನೀಶ್ ಅವರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಅಜಯ್ ಅವರಿಗೆ ಸೂಚನೆ ನೀಡಿದರು.
ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ಪೂರ್ಣಗೊಳ್ಳದಿರುವ ಬಗ್ಗೆ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳಿಂದ ಸಾಕಷ್ಟು ದೂರುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಗುತ್ತಿಗೆದಾರರು, ಸ್ಮಾರ್ಟ್‍ಸಿಟಿ ಅಧಿಕಾರಿಗಳು ಹಾಗೂ ಪಿ.ಎಂ.ಸಿ ಅಭಿಯಂತರರೊಂದಿಗೆ ಚರ್ಚಿಸಿದ ಅವರು ಗುತ್ತಿಗೆದಾರರು ಹಾಗೂ ಇತರೆ ಇಲಾಖೆಯವರ ಸಮನ್ವಯತೆ ಇಲ್ಲದಿರುವುದರಿಂದ ಕಾಮಗಾರಿ ಪ್ರಗತಿಯಲ್ಲಿ ಹಿನ್ನಡೆಯಾಗುತ್ತಿರುವ ಬಗ್ಗೆ ಸ್ಮಾರ್ಟ್ ಸಿಟಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಕಳೆದ 1 ವಾರದಿಂದ ತೀವ್ರ ಮಳೆಯಾಗುತ್ತಿರುವುದರಿಂದ ನಗರದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಅಲ್ಲಲ್ಲಿ ಛೇಂಬರ್ ನಿರ್ಮಾಣಕ್ಕಾಗಿ ಅಗೆದ ಮಣ್ಣನ್ನು ಸರಿಯಾದ ರೀತಿಯಲ್ಲಿ ಮುಚ್ಚದೆ ರಸ್ತೆಯು ಸಾಕಷ್ಟು ಕೆಸರಿನಿಂದ ಕೂಡಿದೆ. ಕಾಮಗಾರಿ ಸ್ಥಳದಲ್ಲಿ ಒಂದು ರೋಲರ್ ಯಂತ್ರವೂ ಸಹ ಇರುವುದಿಲ್ಲ. ಕೂಡಲೇ ಮಣ್ಣನ್ನು ಸಮಗೊಳಿಸಲು 2 ರೋಲರ್‍ಗಳನ್ನು ತರಿಸಿ ಉದ್ದೇಶಿತ ಸಾಂದ್ರತೆಗೆ Compaction ಮಾಡಲು ಗುತ್ತಿಗೆದಾರರಿಗೆ ಅವರು ಸೂಚಿಸಿದಾಗ ಹಗಲು-ರಾತ್ರಿ ವೇಳೆಯಲ್ಲಿಯೂ ಕಾಮಗಾರಿ ಕೈಗೊಂಡು ಪೂರ್ಣಗೊಳಿಸಿ ಕೊಡುತ್ತೇನೆಂದು ಗುತ್ತಿಗೆದಾರರು ಒಪ್ಪಿಕೊಂಡರು.