ತುಮಕೂರು: ನಗರದ ಶ್ರೀ ಸಿದ್ಧಾರ್ಥ ದಂತ ವೈದ್ಯಕೀಯ ಕಾಲೇಜಿನ ವತಿಯಿಂದ ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ದಂತ ತಪಾಸಣೆ ಮತ್ತು ದಂತ ರಕ್ಷಣೆ ಜಾಗೃತಿ ಶಿಬಿರ ಯಶಸ್ವಿಯಾಗಿ ಜರುಗಿತು.
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ(ಕೋಟೆ ಶಾಲೆ)ಆವರಣದಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಶಾಲಾ ಮಕ್ಕಳಿಗೆ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಆಂದೋಲನದಲ್ಲಿ ಮಾತನಾಡಿದ ಶ್ರೀ ಸಿದ್ಧಾರ್ಥ ದಂತ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನ ಸಮುದಾಯ ದಂತ ವೈದ್ಯಕೀಯ ವಿಭಾಗದ ರೀಡರ್ ಡಾ. ದರ್ಶನಾ ಬೆನ್ನಾಡಿ, ಆರೋಗ್ಯ ಶುಚಿತ್ವಕ್ಕೆ ಮಹತ್ವ ಕೊಡುವ ನಾವು ದಂತ ಶುಚಿತ್ವಕ್ಕೂ ಪ್ರಾಮುಖ್ಯತೆ ನೀಡಬೇಕು. ಮಕ್ಕಳಲ್ಲಿ ದಂತ ಶುಚಿತ್ವ, ದಂತ ಆರೋಗ್ಯದ ಬಗ್ಗೆ ಬಾಲ್ಯದಲ್ಲೇ ಅರಿವು ಮೂಡಿಸುವ ಪ್ರಯತ್ನವನ್ನು ಪೋಷಕರು ಮಾಡಬೇಕು ಎಂದ ಅವರು, ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಹೌಸ್ ಸರ್ಜನ್ಸ್ಗಳಾದ ಇಂಪಾನಾ, ಮೃಗಾಂಕ್ ಮತ್ತು ಕೃತಿಯ ಹಾಗು ವಿದ್ಯಾರ್ಥಿಗಳು ಭಾಗವಹಿಸಿದರು. ಕಾರ್ಯಾಗಾರದಲ್ಲಿ ಶಾಲೆಯ ಎಲ್ಲಾ ಮಕ್ಕಳಿಗೆ ಉಚಿತ ತಪಾಸಣೆ ನೀಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರಿಗೂ ದಂತ ತಪಾಸಣೆ ನಡೆಸಿ, ಚಿಕಿತ್ಸೆ ನೀಡಲಾಯಿತು. ಸುಮಾರು 300 ಮಂದಿ ಶಿಬಿರದ ಪ್ರಯೋಜನ ಪಡೆದರು.