ತುಮಕೂರು:
ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಅವರ ಮೇಲೆ ರಾಮನಗರದ ಕ್ಯಾತಿಗಾನಹಳ್ಳಿ ಗ್ರಾಮದಲ್ಲಿ ಹಲ್ಲೆ ನಡೆಸಿರುವುದನ್ನು ಖಂಡಿಸಿ, ಹಲ್ಲೆಕೋರರನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ತುಮಕೂರು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಡಿ.ಸಿ.ತಮ್ಮಣ್ಣ 200 ಎಕರೆ ಭೂಮಿಯನ್ನು ಅಕ್ರಮವಾಗಿ ಕಬಳಿಕೆ ಮಾಡಿದ್ದಾರೆಂದು ಲೋಕಾಯುಕ್ತರು ನೀಡಿದ್ದ ವರದಿಯನ್ನು ಜಾರಿ ಮಾಡುವಂತೆ, ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಎಸ್.ಆರ್.ಹಿರೇಮಠ್ ಅವರು ದಾಖಲಿಸಿದ್ದು, ನ್ಯಾಯಾಲಯದ ಆದೇಶದ ವಸ್ತುಸ್ಥಿತಿ ಅರಿಯಲು ಬಿಡದಿ ಬಳಿಯ ಕ್ಯಾತಿಗಾನಹಳ್ಳಿಗೆ ಹೋಗಿದ್ದಾಗ ಅವರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ ಎಂದು ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಕುಣಿಹಳ್ಳಿ ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದರು.
ಹಲ್ಲೆ ನಡೆಸಿರುವ ಹಲ್ಲೆಕೋರರನ್ನು ತಕ್ಷಣ ಬಂಧಿಸಬೇಕು ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಹೋರಾಟಗಾರರ ಮೇಲೆ ಹಲ್ಲೆ ನಡೆಸುತ್ತಿರುವುದು ಅಕ್ಷಮ್ಯ ಕೃತ್ಯವಾಗಿದ್ದು, ಅವರನ್ನು ಕಾನೂನಿನ ಕ್ರಮ ಜರುಗಿಸಬೇಕು ಹಾಗೂ ಹೋರಾಟಗಾರರಿಗೆ ರಕ್ಷಣೆ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ವೇಳೆ ವೇದಿಕೆಯ ರಾಜ್ಯಾಧ್ಯಕ್ಷರಾದ ಹೆಚ್.ಜಿ.ರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ಕುಮಾರ್.ಕೆ.ಎಂ, ಜಿಲ್ಲಾ ಸಹಕಾರ್ಯದರ್ಶಿ ಗಿರೀಶ್, ಹನುಮದಾಸ್, ಚೆಂಗುಮಣಿ, ಜಿಲ್ಲಾ ಉಪಾಧ್ಯಕ್ಷರಾದ ಲಕ್ಷ್ಮೀಶ ಸೇರಿದಂತೆ ಇತರರಿದ್ದರು.