ಗುಬ್ಬಿ:
ಗೋಮಾಂಸ ರಫ್ತು ಮಾಡುವ ಕಂಪೆನಿಗಳು ಅತೀ ಹೆಚ್ಚು ಬಿಜೆಪಿ ಮುಖಂಡರ ಒಡೆತನದಲ್ಲಿವೆ. ಮೋದಿ ಅವರು ಪ್ರಧಾನಿ ಆದ ಬಳಿಕ ದೇಶದಿಂದ ಗೋಮಾಂಸ ರಫ್ತು ದ್ವಿಗುಣಗೊಂಡಿರುವುದು ಅಂಕಿಅಂಶದಲ್ಲಿವೆ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಅಚ್ಚರಿ ವ್ಯಕ್ತಪಡಿಸಿದರು.
ತಾಲ್ಲೂಕಿನ ಸುರಿಗೇನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ಮುನ್ನ ಮಾತನಾಡಿದ ಅವರು ಗೋಹತ್ಯೆ ನಿಷೇಧ ಕಾನೂನು ತರುವ ಮುನ್ನ ಅದರ ಆಗುಹೋಗು ಚರ್ಚಿಸಬೇಕಿತ್ತು. ಕೇವಲ ಕಾರ್ಪೋರೆಟ್ ಸಂಸ್ಥೆಗಳ ಅಧೀನದಲ್ಲಿ ಕೇಂದ್ರ ಸರ್ಕಾರ ನಡೆದಿದೆ. ಎಲ್ಲವೂ ಬಂಡವಾಳಶಾಹಿಗಳ ಕಂಪೆನಿಯದ್ದಾಗಿದೆ. ನಾಲ್ಕನೇ ಅಂಗವಾದ ಮಾಧ್ಯಮ ಸಂಸ್ಥೆಗಳು ಕಾರ್ಪೋರೆಟ್ ಸಂಸ್ಥೆಗಳು ನಡೆಸಿರುವುದು ಮತ್ತೊಂದು ವಿಪರ್ಯಾಸ ಎನಿಸಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ದೇಶದೆಲ್ಲಡೆ ಗೋಹತ್ಯೆ ನಿಷೇಧದ ಒಂದೇ ಕಾನೂನು ಜಾರಿ ಮಾಡಲಾಗದೆ ಆಯ್ದ ಕೆಲ ರಾಜ್ಯಗಳಲ್ಲಿ ಕಾಯಿದೆ ಜಾರಿಯ ಹಿಂದೆ ಕೂಡಾ ಬಂಡವಾಳಶಾಹಿಗಳ ಕಂಪೆನಿ ಗಳಿವೆ. ಒಟ್ಟಾರೆ ಅನಿಯಮಿತ ಎಮೆರ್ಜೆನ್ಸಿ ದೇಶದಲ್ಲಿ ಕಣ್ಣಿಗೆ ಕಾಣದಂತೆ ಜಾರಿ ಯಾಗುತ್ತಿದೆ. ವಿರೋಧ ಪಕ್ಷ, ಚುನಾಯಿತ ಪ್ರತಿನಿಧಿಗಳ ಚರ್ಚೆಗೆ ಅವಕಾಶವಿಲ್ಲ. ಯಾರೊಬ್ಬರೂ ಇವರ ಆಡಳಿತ ಬಗ್ಗೆ ಮಾತನಾಡುವಂತಿಲ್ಲ ಎಂದು ಕಿಡಿಕಾರಿದ ಅವರು ಮೋದಿ ಅವರ ಸುಳ್ಳು ಆಶ್ವಾಸನೆ ಪಟ್ಟಿ ಬೆಳೆದಿದೆ. 2 ಕೋಟಿ ಉದ್ಯೋಗ ಸೃಷ್ಟಿ ಮತ್ತು ಕಪ್ಪುಹಣ ತಂದು ಬಡವರಿಗೆ 15 ಲಕ್ಷ ಹಂಚುವ ಸುಳ್ಳು ಭರವಸೆಗೆ ಜನ ಮರಳಾಗಿದ್ದರು. ಅವರ ನಿಜವಾದ ಬಣ್ಣ ಈಗ ಜನರಿಗೆ ತಿಳಿಯುತ್ತಿದೆ. ಇಂತಹ ಪಕ್ಷಕ್ಕೆ ನಾನು ಹೋಗುವುದಾಗಿ ವದಂತಿ ಹಬ್ಬಿಸಲಾಗಿತ್ತು. ಲೋಕಸಭಾ ಚುನಾವಣೆ ಸಂದರ್ಭ ಕೆಲ ಭಿನ್ನ ವರ್ತನೆ ತೋರಿದ್ದೆ. ಆದರೆ ಕಾಂಗ್ರೆಸ್ ಬಿಡುವ ಮಾತು ಆಡಿರಲಿಲ್ಲ ಎಂದರು.