ಹುಳಿಯಾರು:
ಹುಳಿಯಾರಿನ ಹೃದಯ ಭಾಗದಲ್ಲಿನ ಕರ್ನಾಟಕ ಪಬ್ಲಿಕ್ ಸ್ಕೂಲ್‍ನ ಆವರಣದಲ್ಲಿ ಕುಡುಕರ ಹಾವಳಿ ತಪ್ಪಿಸಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನೆಮ್ಮದಿಯ ಓಡಾಟಕೆ ಅನುವು ಮಾಡಿಕೊಡುವಂತೆ ಕಾಮಶೆಟ್ಟಿಪಾಳ್ಯದ ಚನ್ನಬಸವಯ್ಯ ಮನವಿ ಮಾಡಿದ್ದಾರೆ.
ಕೊರೊನಾದಿಂದಾಗಿ ಕಳೆದ ಎಂಟತ್ತು ತಿಂಗಳಿಂದ ಶಾಲೆ ಬಾಗಿಲು ತೆರೆದಿಲ್ಲ. ಇದನ್ನೇ ನೆಪ ಮಾಡಿಕೊಂಡಿರುವ ಕೆಲ ಕಿಡಿಕೇಡಿಗಳು ಸಂಜೆ 7 ಗಂಟೆಯ ನಂತರ ಶಾಲಾ ಮೈದಾನದಲ್ಲಿ ಕುಳಿತು ಮದ್ಯಪಾನ ಮಾಡುತ್ತಿದ್ದಾರೆ. ನಂತರ ಖಾಲಿ ಬಾಟಲಿಗಳು, ಸಾಚೆಟ್‍ಗಳು, ಗುಟುಕದ ಕವರ್‍ಗಳು ಬೀಡಿ ಸೀಗರೇಟಿನ ತುಂಡುಗಳನ್ನು ಶಾಲೆಯ ಬಾಗಿಲ ಮಂಭಾಗದಲ್ಲೇ ಎಸೆದು ಹೋಗುತ್ತಿದ್ದಾರೆ. ಇದರಿಂದ ಶಾಲೆಗೆ ಬರುವ ಶಿಕ್ಷಕರು ಹಾಗೂ ಇಲ್ಲಿ ಓಡಾಡುವಂತಹ ಜನರಿಗೆ ತೊಂದರೆಯಾಗುತ್ತಿದೆ ಎಂದು ದೂರಿದ್ದಾರೆ.
ಬೆಳಗ್ಗೆ ಮತ್ತು ಸಂಜೆ ಮಕ್ಕಳು ಆಡಲಿಕ್ಕೆ ಈ ಮೈದಾನಕ್ಕೆ ಬರುತ್ತಾರೆ. ವೃದ್ಧರು, ಮಹಿಳೆಯರು ಬೆಳಗ್ಗೆ, ಸಂಜೆ ವಾಯು ವಿಹಾರಕ್ಕೆ ಬರುತ್ತಾರೆ. ಶಾಲಾ ಮೈದಾನದಲ್ಲಿ ಬಿದ್ದಿರುವ ಮದ್ಯದ ಬಾಟಲಿಗಳು, ಗುಟುಕದ ಪಾಕೇಟ್‍ಗಳು ಇವರ ನೆಮ್ಮದಿಯ ವಾಯವಿಹಾರಕೆ ಭಂಗ ತಂದಿದೆ. ಹಾಗಾಗಿ ವಾಯು ವಿಹಾರಕ್ಕೆ ಹೋಗುವುದನ್ನೇ ಕೆಲವರು ಬಿಟ್ಟಿದ್ದಾರೆ ಎಂದು ಸಮಸ್ಯೆ ವಿವರಿಸಿದ್ದಾರೆ.
ಪಟ್ಟಣದ ಹೃದಯ ಭಾಗದಲ್ಲಿರುವ ದೊಡ್ಡ ಮೈದಾನವಿರುವ, ಮಕ್ಕಳು, ವೃದ್ಧರು, ಮಹಿಳೆಯರು ಬಂದೋಗುವ ಈ ಸ್ಥಳಕ್ಕೆ ಪಂಚಾಯ್ತಿ ಲೈಟ್ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯಿಸಿದೆ. ಪೊಲೀಸ್ ಠಾಣೆಯ ಮುಂಭಾಗವೇ ಮೈದಾನವಿದ್ದರೂ ಪೊಲೀಸರು ರಾತ್ರಿ ಬೀಟ್ ಬರುತ್ತಿಲ್ಲ. ಪರಿಣಾಮ ಕತ್ತಲು ಮತ್ತು ಕೇಳುವವರಾರು ಇಲ್ಲದಿರುವುದು ಕುಡುಕರಿಗೆ ವರವಾಗಿದೆ.
ಹಾಗಾಗಿ ತಕ್ಷಣ ಮೈದಾನಕ್ಕೆ ವಿದ್ಯುತ್ ದೀಪಗಳನ್ನು ಅಳವಡಿಸಿ ರಾತ್ರಿ 8 ಗಂಟೆ ನಂತರ ಪೊಲೀಸರು ಆಗಾಗ ಬೀಟ್ ಬಂದು ಕುಡುಕರ ಹಾವಳಿಗೆ ಕಡಿವಾಣ ಹಾಕುವಂತೆ ಚನ್ನಬಸವಯ್ಯ ಮನವಿ ಮಾಡಿದ್ದಾರೆ.