ಹುಳಿಯಾರು:
ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆ.ಸಿ.ಪಾಳ್ಯದ ಶುದ್ಧ ನೀರಿನ ಘಟಕ ಕೆಟ್ಟು ಎರಡ್ಮೂರು ತಿಂಗಳಾಗಿದ್ದು ತಕ್ಷಣ ದುರಸ್ಥಿ ಮಾಡಿ ಪುಣ್ಯ ಕಟ್ಕೊಳ್ಳಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಕೆ.ಸಿ.ಪಾಳ್ಯ ಗ್ರಾಮದ ಇನ್ನೂರಕ್ಕೂ ಹೆಚ್ಚು ಮನೆಗಳೂ ಸೇರಿದಂತೆ ಸಮೀಪದ ಲಿಂಗಪ್ಪನಪಾಳ್ಯ, ಗೌಡಗೆರೆ, ಸೋಮಜ್ಜನಪಾಳ್ಯದ ಜನರಿಗೆ ಈ ಶುದ್ಧ ನೀರಿನ ಘಟಕ ನೀರು ಪೂರೈಸುತ್ತಿತ್ತು. ಆದರೆ ಈಗ ಈ ಘಟಕ ಕೆಟ್ಟಿದ್ದು ಶುದ್ಧ ನೀರಿಗೆ ಜನ ಪರದಾಡುವಂತ್ತಾಗಿದೆ.
ಪರಿಣಾಮ ಮೂರ್ನಲ್ಕು ಕಿ.ಮೀ.ದೂರದ ಕೆಂಕೆರೆ ಗ್ರಾಮಕ್ಕೆ ಹೋಗಿ ನೀರು ತರುವ ಅನಿವಾರ್ಯತೆ ನಿರ್ಮಾಣವಾಗಿದೆ. ಬೈಕು, ಸೈಕಲ್ ಉಳ್ಳವರು ಕೆಂಕೆರೆಗೆ ಹೋಗಿ ಬರುತ್ತಿದ್ದು ಇಲ್ಲದವರು ಪಂಚಾಯ್ತಿಯ ಕೊಳಾಯಿ ನೀರು ಕುಡಿಯುತ್ತಿದ್ದಾರೆ.
ಈ ಫಿಲ್ಟರ್ ಪದೇ ಪದೇ ಕೆಡುತ್ತಿದ್ದು ಒಮ್ಮೆ ಕೆಟ್ಟರೆ ಎರಡ್ಮೂರು ತಿಂಗಳು ದುರಸ್ಥಿ ಮಾಡದೆ ನಿರ್ಲಕ್ಷ್ಯಿಸುತ್ತಾರೆ. ಪಂಚಾಯ್ತಿ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಹೇಳಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಹಾಗಾಗಿ ಮೇಲಧಿಕಾರಿಗಳು ಇತ್ತ ಗಮನ ಹರಿಸಿ ತಕ್ಷಣ ನೀರಿನ ಘಟಕ ದುರಸ್ಥಿ ಮಾಡಿಸುವಂತೆ ಮನವಿ ಮಾಡಿದ್ದಾರೆ.