ತುಮಕೂರು :
ಜಿಲ್ಲೆಯಲ್ಲಿ ತೆಂಗು ಕುರಿತ ಕಾರ್ಯಾಗಾರ/ ಮೇಳವನ್ನು ಆಯೋಜಿಸುವ ಕುರಿತಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತುಮಕೂರು ಜಿಲ್ಲೆಯು ಕೇಂದ್ರ ಸರ್ಕಾರದ ಒಂದು ಜಿಲ್ಲೆ ಒಂದು ಉತ್ಪನ್ನದಡಿ ತೆಂಗು ಆಯ್ಕೆಯಾಗಿದ್ದು, ತೆಂಗು ಬೆಳೆಯುವುದು, ತೆಂಗಿನ ವಿವಿಧ ಉತ್ಪನ್ನಗಳು, ಅಭಿವೃದ್ಧಿ, ಉತ್ಪಾದನೆ, ರೋಗನಿಯಂತ್ರಣ ಸೇರಿದಂತೆ ತೆಂಗುವಿನ ಅನೇಕ ವಿಷಯಗಳ ಬಗ್ಗೆ ತಜ್ಞರಿಂದ ರೈತರಿಗೆ, ಸಾರ್ವಜನಿಕರಿಗೆ ಅರಿವು ಮೂಡಿಸಲು ಈ ಕಾರ್ಯಾಗಾರ ಮೇಳ ಆಯೋಜಿಸಲಾಗುವುದು. ಮೇಳ ಆಯೋಜಿಸುವ ದಿನಾಂಕ, ಸಮಯ, ಸ್ಥಳ, ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದರು.
ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳನ್ನೊಳಗೊಂಡಂತೆ ಸ್ವಾಗತ ಸಮಿತಿ, ಪ್ರಚಾರ ಸಮಿತಿ, ಪ್ರದರ್ಶನ ಹಾಗೂ ಮಳಿಗೆ ಸಮಿತಿ, ಹಣಕಾಸು ಸಮಿತಿ ಹೀಗೆ ಹಲವು ಉಪಸಮಿತಿಗಳನ್ನು ರಚಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಕಾರ್ಯಾಗಾರ/ ಮೇಳದಲ್ಲಿ ತಜ್ಞರಿಂದ ಮಾಹಿತಿ ವಿಚಾರ ಸಂಕಿರಣ ಹಾಗೂ ತೆಂಗು ಆಧಾರಿತ ಉತ್ಪನ್ನಗಳ ಪ್ರದರ್ಶನ, ತೆಂಗು-ನಾರುಗಳ ಕೈಗಾರಿಕಾ ಸ್ಥಾಪನೆಗೆ ಇರುವ ಅವಕಾಶಗಳ ಬಗ್ಗೆ ಮಳಿಗೆಗಳನ್ನು ತೆರೆದು ಮಾಹಿತಿ ನೀಡಲಾಗುವುದು. ಈ ವೇಳೆ ಪ್ರದರ್ಶನಕ್ಕೆ ಬರುವ ರೈತರಿಗೆ, ಸಾರ್ವಜನಿಕರಿಗೆ ತೆಂಗು-ನಾರು, ಕೊಬ್ಬರಿ ಎಣ್ಣೆ, ಮಟ್ಟೆ, ಚಿಪ್ಪುಗಳ ಉಪಯೋಗಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವಂತಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೃಷಿ ತೋಟಗಾರಿಕೆ, ಮಹಾನಗರ ಪಾಲಿಕೆ, ಟೂಡಾ ಸೇರಿದಂತೆ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ತೆಂಗು ಮೇಳ/ಕಾರ್ಯಾಗಾರ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲಾ ಪಂಚಾಯತಿ ಸಿಇಓ ಗಂಗಾಧರ ಸ್ವಾಮಿ ಮಾತನಾಡಿ, ತೆಂಗು ಹಾಗೂ ಅದರ ಉತ್ಪನ್ನಗಳ ಬಗ್ಗೆ ಪ್ರಚಾರಪಡಿಸಲು ಮತ್ತು ಪ್ರೋತ್ಸಾಹಿಸಲು ರಾಯಭಾರಿಯನ್ನು ನೇಮಿಸಬೇಕು. ಪ್ರದರ್ಶನಕ್ಕೆ ಬರುವ ರೈತರಿಗೆ ವಿವಿಧ ತಳಿಯ ತೆಂಗು ಉತ್ಪನ್ನ ಮತ್ತು ತೆಂಗು ಕೈಗಾರಿಕೆ ಸ್ಥಾಪಿಸುವವರಿಗೆ ಮೇಳದಲ್ಲಿ ತೊಂದರೆಯಾಗದಂತೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಜಿಲ್ಲೆಯಲ್ಲಿ ತೆಂಗು ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಮತ್ತು ಪ್ರಗತಿಪರ ರೈತರನ್ನು ಆಹ್ವಾನಿಸಿ ರೈತರಿಗೆ ಅರಿವು ಮೂಡಿಸುವ ವೇದಿಕೆಯಾಗಬೇಕು. ಪದರ್ಶನಕ್ಕೆ ಬರುವ ಸಾರ್ವಜನಿಕರಿಗೆ ಎಲ್.ಇ.ಡಿ. ಪರದೆಯಲ್ಲಿ ತೆಂಗು ಬೆಳೆ ಉತ್ಪನ್ನಗಳ ಬಗ್ಗೆ ಆಕರ್ಷಕವಾಗಿ ಪ್ರದರ್ಶಿಸಬೇಕು ಎಂದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ರಾಜಸುಲೋಚನಾ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಪ್ರಸಾದ್, ಉಪನಿರ್ದೇಶಕ ರಘು, ನಬಾರ್ಡ್, ಹಿರೇಹಳ್ಳಿ ಕೆ.ವಿ.ಕೆ. ಪ್ರತಿನಿಧಿಗಳು, ಅರಸೀಕೆರೆ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಪ್ರತಿನಿಧಿಗಳು, ಜಿಲ್ಲಾ ಕೈಗಾರಿಕಾ ತರಬೇತಿ ಜಂಟಿ ನಿರ್ದೇಶಕ ನಾಗೇಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.