ತಿಪಟೂರು :
ಕೂಲಿ ಮತ್ತು ಕಟ್ಟಡ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯಗಳಿಗೆ ಸರ್ಕಾರದ ಸೌಲಭ್ಯಗಳು ಸಿಗಬೇಕೆಂಬ ಉದ್ದೇಶದಿಂದ ಶಾಂತಕುಮಾರ್ ಅಭಿಮಾನಿ ಬಳಗದ ವತಿಯಿಂದ ಉಚಿತ ಸ್ಮಾರ್ಟ್ ಕಾರ್ಡ್‍ಗಳನ್ನು ಮಾಡಿಸಿಕೊಡಲಾಗುವುದು ಎಂದು ತಾಲೂಕು ಕಾಂಗ್ರೆಸ್ ಮುಖಂಡ ಕೆ.ಟಿ. ಶಾಂತಕುಮಾರ್ ತಿಳಿಸಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಕಾರ್ಮಿಕರಿದ್ದು ಅವರು ಸರ್ಕಾರದ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಎಷ್ಟೋ ಕಾರ್ಮಿಕರಿಗೆ ಸ್ಮಾರ್ಟ್‍ಕಾರ್ಡ್ ಬಗ್ಗೆ ಮಾಹಿತಿ ಇಲ್ಲದಂತಾಗಿದೆ. ಕಟ್ಟಡಕಾರ್ಮಿಕರು, ಹಮಾಲರು, ಚಿಂದಿ ಆಯುವವರು, ಗೃಹ ಕಾರ್ಮಿಕರು, ಟೈಲರ್, ಕೃಷಿ, ರಸ್ತೆ ಕಾರ್ಮಿಕರು, ಕಮ್ಮಾರರು, ಗಾರ್ಮೆಂಟ್ಸ್ ಸೇರಿದಂತೆ ಕೆಳ ವರ್ಗದ ಕೂಲಿ ಕಾರ್ಮಿಕರಿಗೆ ಸರ್ಕಾರದ ಯಾವುದೇ ಸೌಲಭ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದೆ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ವರೆಲ್ಲ ನಿತ್ಯ ಕಷ್ಟದ ಜೀವನ ನಡೆಸುತ್ತಿದ್ದು, ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ, ಕುಟುಂಬ ನಿರ್ವಹಣೆಗೆ ಕಷ್ಟಪಡುವಂತಾಗಿದೆ. ಸರ್ಕಾರವೂ ಸಹ ಇಂತಹ ಅಸಂಘಟಿತ ವಲಯಗಳನ್ನು ಗುರ್ತಿಸಿ ಅಂಬೇಡ್ಕರ್ ಕಾರ್ಮಿಕರ ಸಹಾಯ ಹಸ್ತ ಯೋಜನೆಯಡಿ ಸ್ಮಾರ್ಟ್‍ಕಾರ್ಡ್‍ಗಳನ್ನು ವಿತರಿಸಲಾಗುತ್ತಿದೆ. ಆದರೆ ಈ ಬಗ್ಗೆ ಮಾಹಿತಿಯ ಕೊರತೆ ಎದ್ದು ಕಾಣುತ್ತಿದೆ. ಸ್ಮಾರ್ಟ್ ಕಾರ್ಡ್ ಪಡೆದುಕೊಂಡರೆ ಪಿಂಚಣಿ ಸೌಲಭ್ಯ, ವಸತಿ, ಹೆರಿಗೆ ಸೌಲಭ್ಯ, ಮದುವೆಗೆ ಧನಸಹಾಯ, ಅಪಘಾತ ಪರಿಹಾರ, ಅಂತ್ಯಕ್ರಿಯೆ ವೆಚ್ಚ ಸೇರಿದಂತೆ ಹತ್ತಾರು ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕ ಸಂಕಷ್ಟದಿಂದ ಪಾರಾಗಬಹುದು. ತಾಲೂಕಿನಲ್ಲಿರುವ ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕ ಒಕ್ಕೂಟದ ಸಹಯೋಗದೊಂದಿಗೆ ನಾವು ಕೈಜೋಡಿಸಿ ನಗರ ಮತ್ತು ತಾಲೂಕಿನಲ್ಲಿರುವ ಅಸಂಘಟಿತ ವಲಯಗಳನ್ನು ಸರ್ವೆ ಮಾಡಿ ಅವರಿಗೆ ಸ್ಮಾರ್ಟ್‍ಕಾರ್ಡ್ ಮಾಡಿಕೊಡಲಾಗುವುದು. ಒಂದು ಸ್ಮಾರ್ಟ್‍ಕಾರ್ಡ್ ಮಾಡಿಕೊಡಲು 250-500ರೂ ಖರ್ಚಾಗಲಿದ್ದು ಕೂಲಿ ಕಾರ್ಮಿಕರು ಇಷ್ಟೊಂದು ಹಣವನ್ನು ಒದಗಿಸಲು ಕಷ್ಟವಾಗಲಿದೆ. ಇವರ ಕಷ್ಟವನ್ನು ಅರಿತು ಉಚಿತವಾಗಿ ಸ್ಮಾರ್ಟ್‍ಕಾರ್ಡ್ ಮಾಡಿಸಿಕೊಡುವ ಜವಾಬ್ದಾರಿಯನ್ನು ನಾನು ತೆಗೆದುಕೊಂಡಿದ್ದೇನೆ. ನಗರದಲ್ಲಿರುವ ಕಾರ್ಮಿಕ ಇಲಾಖೆ ಕಾರ್ಮಿಕರ ಯೋಗಕ್ಷೇಮ ವಿಚಾರಿಸುವಲ್ಲಿ ವಿಫಲವಾಗಿದ್ದು, ದಿನದ 24 ಗಂಟೆಯೂ ಬಾಗಿಲನ್ನು ಮುಚ್ಚಿರುತ್ತದೆ. ಎಷ್ಟೋ ಕಾರ್ಮಿಕರಿಗೆ ನಗರದಲ್ಲಿ ಕಾರ್ಮಿಕ ಇಲಾಖೆ ಇದೆ ಎಂಬುದೇ ಮರೆತು ಹೋಗಿದೆ. ತಾಲೂಕು ಆಡಳಿತ ಈ ಬಗ್ಗೆ ಗಮನಹರಿಸಿ ಕಾರ್ಮಿಕರಿಗೆ ಸರ್ಕಾರದಿಂದ ಬರುವ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ತಾಲೂಕಿನಲ್ಲಿರುವ ಕಾರ್ಮಿಕರನ್ನು ಒಗ್ಗೂಡಿಸಿ ಕಾರ್ಮಿಕ ಇಲಾಖೆ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಶಾಂತಕುಮಾರ್ ಎಚ್ಚರಿಕೆ ನೀಡಿದರು.
ನಾನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್‍ರವರ ನೇತೃತ್ವದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ತಾಲೂಕಿನಲ್ಲಿ ಪಕ್ಷ ಸಂಘಟನೆ ಮಾಡುವಂತೆ ನನಗೆ ತಿಳಿಸಿದ್ದಾರೆ. ಈ ಬಗ್ಗೆ ಕಾರ್ಯಕರ್ತರಲ್ಲಿ ಯಾವುದೇ ಗೊಂದಲ ಬೇಡ. ಮಾಜಿ ಶಾಸಕರಾದ ಕೆ.ಷಡಕ್ಷರಿಯವರು 45 ವರ್ಷಗಳಿಂದಲೂ ತಾಲೂಕಿನ ಜನರ ಸೇವೆ ಮಾಡುತ್ತಾ ಬಂದಿದ್ದು, ಅವರ ಬಗ್ಗೆ ನಮಗೆ ಅಪಾರ ಗೌರವವಿದ್ದು ಮುಂದಿನ ದಿನಗಳಲ್ಲಿ ಅವರೊಂದಿಗೆ ಸೇರಿ ಪಕ್ಷ ಸಂಘಟನೆಯಲ್ಲಿ ತೊಡಗುತ್ತೇನೆ. ಎಂದು ಕೆ.ಟಿ. ಶಾಂತಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಟ್ಟದ ನಿರ್ಮಾಣ ಕಾರ್ಮಿಕ ಒಕ್ಕೂಟದ ತಾ. ಅಧ್ಯಕ್ಷ ಸರ್ವೇಶಾಚಾರ್, ಕೆ.ಟಿಎಸ್ ಅಭಿಮಾನಿ ಬಳಗದ ಮೋಹನ್‍ಬಾಬು, ದಿನೇಶ್, ಮಂಜುನಾಥ್, ಧರಣೀಶ್ ಮತ್ತಿತರರಿದ್ದರು.