ತುಮಕೂರು :
ರಾಷ್ಟ್ರದಾದ್ಯಂತ ಆತಂಕದ ಅಲೆ ಸೃಷ್ಟಿಸಿರುವ ಕೋವಿಡ್-19 ಎರಡನೇ ಅಲೆಯನ್ನು ಸಮರ್ಪಕವಾಗಿ ತಡೆಯುವ ನಿಟ್ಟಿನಲ್ಲಿ 45 ವರ್ಷ ಮೇಲ್ಮಟ್ಟ ಪ್ರತಿಯೊಬ್ಬರು ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ಶಾರದ ನರಸಿಂಹಮೂರ್ತಿ ಮನವಿ ಮಾಡಿದ್ದಾರೆ.
45 ವರ್ಷ ತುಂಬಿದ ಎಲ್ಲರೂ ಲಸಿಕೆಯನ್ನು ಸ್ವಯಂ ಪ್ರೇರಿತವಾಗಿ ಪಡೆದುಕೊಂಡು ಕೋವಿಡ್ ಮಹಾಮಾರಿಯನ್ನು ದೇಶದಿಂದ ತೊಲಗಿಸಿ, ದೇಶವನ್ನು ಅಭಿವೃದ್ದಿ ಪಥದತ್ತ ತೆಗೆದುಕೊಂಡು ಹೋಗಲು ಸಹಕರಿಸುವಂತೆ ಮನವಿ ಮಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಮಾತನಾಡಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀಮತಿ ಶಾರದ ನರಸಿಂಹಮೂರ್ತಿ ಹಾಗೂ ಗೂಳೂರು ಜಿ.ಪಂ ಕ್ಷೇತ್ರದ ಸದಸ್ಯ ಶಿವಕುಮಾರ್ ಲಸಿಕೆ ಪಡೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಸರಕಾರದ ತೀರ್ಮಾನದಂತೆ ಶೇ.25ರಷ್ಟು ಜನರಿಗೆ ಲಸಿಕೆ ನೀಡಬೇಕೆಂಬ ಅಭಿಯಾನಕ್ಕೆ ಪುಷ್ಠಿ ದೊರೆತಂತಾಗಿದೆ. ಇದೇ ಮಾದರಿಯಲ್ಲಿ 45 ವರ್ಷ ತುಂಬಿದ ಪ್ರತಿಯೊಬ್ಬ ನಾಗರಿಕರು ಸ್ವಯಂ ಪ್ರೇರಣೆಯಿಂದ ಲಸಿಕೆ ತೆಗೆದುಕೊಳ್ಳುವ ಮೂಲಕ ಸರಕಾರದ ಅಭಿಯಾನ ಯಶಸ್ವಿಯಾಗಲು ಸಹಕರಿಸಬೇಕೆಂದರು.
ಜಿಲ್ಲೆಯಲ್ಲಿ ಇದುವರೆಗೂ ಸುಮಾರು 1.25 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. ಕಳೆದ ಎರಡು ದಿನಗಳ ಹಿಂದೆ 40 ಸಾವಿರ ಡೋಸ್ ಲಸಿಕೆ ಬಂದಿದೆ. ಅದನ್ನು 10 ತಾಲೂಕುಗಳಿಗೂ ಹಂಚಿಕೆ ಮಾಡಲಾಗಿದೆ. ಜನರ ಬೇಡಿಕೆ ಆದರಿಸಿ ಲಸಿಕೆ ಬಿಡುಗಡೆ ಮಾಡಲಾಗುತ್ತದೆ. ಶೇ.25ರ ಅಭಿಯಾನದಲ್ಲಿ ಜಿಲ್ಲೆಯ 6-7 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಯಾವುದೇ ಅಡ್ಡ ಪರಿಣಾಮ ವಿಲ್ಲದ ಲಸಿಕೆಯನ್ನು ಪಡೆದುಕೊಳ್ಳುವ ಮೂಲಕ ಜನರು ಕೋವಿಡ್ ಮಹಾಮಾರಿಯಿಂದ ದೂರವಾಗುವಂತೆ ಸಲಹೆ ನೀಡಿದರು.
ಇದೇ ವೇಳೆ ಜಿಲ್ಲಾ ಪಂಚಾಯಿತಿ ಸದಸ್ಯ ಗೂಳೂರು ಶಿವಕುಮಾರ್ ಮತ್ತು ತಾಲೂಕು ವೈದ್ಯಾಧಿಕಾರಿ ಡಾ.ಮಹೇಶ್ ಇದ್ದರು.