ಹುಳಿಯಾರು :
ಕೊರೊನಾ ಸೋಂಕು ಹರಡುವಿಕೆ ತಡೆಯಲು ಸರ್ಕಾರ ಘೋಷಿಸಿರುವ ಲಾಕ್‍ಡೌನ್ ನಿಯಮಗಳನ್ನು ಮೀರಿ, ಅನಾವಶ್ಯಕವಾಗಿ ರಸ್ತೆಗಿಳಿದ ಸುಮಾರು 50 ಕ್ಕೂ ಹೆಚ್ಚು ಬೈಕ್‍ಗಳನ್ನು ಹುಳಿಯಾರು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಲಾಕ್‍ಡೌನ್ ಮಾರ್ಗಸೂಚಿಯಂತೆ ಬೆಳಿಗ್ಗೆ 6 ಗಂಟೆಯಿಂದ 10 ರವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಜನರು 10 ಗಂಟೆ ನಂತರವೂ ರಸ್ತೆಗಳಲ್ಲಿ ಓಡಾಡುವುದು ಸಾಮಾನ್ಯವಾಗಿದೆ. ವಿಶೇಷವಾಗಿ ಯುವಕರು ಬೈಕ್ ಏರಿ ನಗರ ಪ್ರದಕ್ಷಿಣೆ ಹಾಕುತ್ತಿದ್ದಾರೆ. ಔಷಧ ಮಾತ್ರೆ ಖರೀದಿ, ಆಸ್ಪತ್ರೆಗೆ ಹೋಗುವ ಸಬೂಬು ಹೇಳುತ್ತಾ ಮನೆಯಿಂದ ಹೊರ ಬಂದು ಪಟ್ಟಣ ಸುತ್ತುವುದು ಸಾಮಾನ್ಯವಾಗಿತ್ತು.
ಪರಿಣಾಮ ಬೆಳಿಗ್ಗೆ 10ರ ನಂತರ ಠಾಣಾಧಿಕಾರಿ ಕೆ.ಟಿ.ರಮೇಶ್ ಮತ್ತು ಸಿಬ್ಬಂದಿ ಪಟ್ಟಣದಲ್ಲಿ ಗಸ್ತು ತಿರುಗುವಾಗ ಸರ್ಕಾರದ ನಿಯಮಗಳನ್ನು ಮೀರಿ ಮತ್ತು ಅನವಶ್ಯಕವಾಗಿ ಬೈಕ್ ಮೇಲೆ ತಿರುಗಾಡುತ್ತಿದ್ದ ಹಲವರ ಬೈಕುಗಳನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಯ ಆವರಣದಲ್ಲಿ ನಿಲ್ಲಿಸಿದ್ದಾರೆ. ಲಾಕ್‍ಡೌನ್ ವೇಳೆ ಮನೆಯಿಂದ ಹೊರಬಂದಿರುವುದಕ್ಕೆ ಕಾರಣ, ಅದಕ್ಕೆ ಪೂರಕ ದಾಖಲೆಪತ್ರವನ್ನು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ಜನರು ಸೂಕ್ತ ಕಾರಣ ಅಥವಾ ದಾಖಲೆಪತ್ರ ತೋರಿಸಿದರೆ ಬಿಟ್ಟು ಕಳುಹಿಸುತ್ತಿದ್ದಾರೆ.
ಮಾಸ್ಕ್ ಧರಿಸದೆ ಓಡಾಡುತ್ತಿರುವವರಿಗೆ, ಲಾಕ್‍ಡೌನ್ ಸಮಯ ಮೀರಿದ್ದರೂ ವ್ಯಾಪಾರ ವಹಿವಾಟು ನಡೆಸುತ್ತಿರುವವರಿಗೆ, ಸಾಮಾಜಿಕ ಅಂತರ ಪಾಲನೆ ಮಾಡದೆ ವ್ಯಾಪಾರ ಮಾಡುತ್ತಿರುವ ಅಂಗಡಿ ಮಾಲೀಕರಿಗೆ ದಂಡ ಹಾಕುತ್ತಿದ್ದಾರೆ. ಅಲ್ಲದೆ ಇಸ್ಪೀಟ್ ಆಡುತ್ತಿದ್ದವರಿಗೂ ಕರ್ನಾಟಕ ಎಪಿಡೆಮಿಕ್ ಆಕ್ಟ್ ಪ್ರಕಾರ 50 ಸಾವಿರದವರೆವಿಗೆ ದಂಡ ಹಾಕಿದ್ದಾರೆ. ಒಟ್ಟಾರೆ ಲಾಕ್‍ಡೌನ್ ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯಿಸುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಂಡು ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಪೊಲೀಸರು ಶ್ರಮಿಸುತ್ತಿದ್ದಾರೆ.