ತುಮಕೂರು :
ಕೊರೋನಾ ವಿರುದ್ಧ ಸೈನಿಕರಂತೆ ದಣಿವರಿಯದೆ ಹೋರಾಡುತ್ತಿರುವ ವೈದ್ಯರು, ಪೆÇಲೀಸರು ಸೇರಿದಂತೆ ಫ್ರಂಟ್ ಲೈನ್ ವರ್ಕರ್ಸ್ ಗಳ ಆರೋಗ್ಯ ರಕ್ಷಣೆಗಾಗಿ ಸ್ಪಿರುಲಿನಾ ಫೌಂಡೇಶನ್ ವತಿಯಿಂದ ಕೊರಟಗೆರೆ ತಾಲೂಕಿನ ಪ್ರವಾಸಿ ಮಂದಿರದಲ್ಲಿಂದು ಹಮ್ಮಿಕೊಂಡಿದ್ದ ‘ರಕ್ಷಕರನ್ನು ರಕ್ಷಿಸಿ’ ಅಭಿಯಾನಕ್ಕೆ ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಚಾಲನೆ ನೀಡಿದರು.
ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಕೋವಿಡ್ -19 ವಿರುದ್ಧ ಹೋರಾಡುತ್ತಿರುವ ಯೋಧರ ಆರೋಗ್ಯ ರಕ್ಷಣೆಗಾಗಿ ಸ್ಪಿರುಲಿನಾ ಫೌಂಡೇಶನ್ ಪ್ರಾರಂಭಿಸಿರುವ ಅಭಿಯಾನ ಉತ್ತಮವಾಗಿದೆ. ವೆಂಟಿಲೇಟರ್, ಆಮ್ಲಜನಕ ಸಿಲಿಂಡರ್, ಹಾಸಿಗೆಗಳನ್ನು ಖರೀದಿಸಬಹುದು, ಆದರೆ ಶಕ್ತಿಯುತ ವೈದ್ಯರು, ದಾದಿಯರು ಸೇರಿದಂತೆ ಕೊರೋನಾ ಮಹಾಮಾರಿ ನಿಯಂತ್ರಣಕ್ಕೆ ಹೋರಾಡುತ್ತಿರುವವರನ್ನು ವಾರಾಂತ್ಯದಲ್ಲಿ ಬದಲಾಯಿಸಲು ಅಥವಾ ಹೊಸದಾಗಿ ಉತ್ಪನ್ನ ಮಾಡಲು ಸಾಧ್ಯವಿಲ್ಲ. ಹಾಗಾಗಿ ಅವರ ಆರೋಗ್ಯ ರಕ್ಷಣೆ ಮುಖ್ಯವಾಗಿದೆ. ಕಳೆದ ಒಂದು ವರ್ಷದಿಂದ ದಣಿವರಿಯದೇ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ಮೂಲಕ ನಾವೆಲ್ಲರೂ ಅವರನ್ನು ಬೆಂಬಲಿಸೋಣ ಎಂದು ಹೇಳಿದರು.
ಸಾಂಕ್ರಾಮಿಕ ರೋಗದ ವಿರುದ್ಧ ಹೆಚ್ಚು ಉತ್ಸಾಹ ಮತ್ತು ಶಕ್ತಿಯೊಂದಿಗೆ ಹೋರಾಡಲು ಸ್ಪಿರುಲಿನಾ ಫೌಂಡೇಶನ್ ಅಭಿಯಾನ ಮೂಲಕ ಆರೋಗ್ಯಕರ ಸೂಕ್ಷ್ಮ ಪೆÇೀಷಕಾಂಶವುಳ್ಳ “ಸ್ಪಿರುಲಿನಾ ಚಿಕ್ಕಿ” ನೀಡುತ್ತಿರುವುದು ಶ್ಲಾಘನೀಯ.
ಸಂಸ್ಥೆಯ ಸಂಸ್ಥಾಪಕ ಹಾಗೂ ಬಯೋಟೆಕ್ನಾಲಜಿ ಇಂಜಿನಿಯರ್ ಆರ್.ವಿ. ಮಹೇಶ್ ಮಾತನಾಡಿ, ಸೀಮಿತ ಸಂಪನ್ಮೂಲಗಳೊಂದಿಗೆ ಈಗಾಗಲೇ ಕಳೆದ ವರ್ಷ ಈ ಕಾರ್ಯ ಮಾಡಿಕೊಂಡು ಬರಲಾಗುತ್ತಿದೆ. ಈ ವರ್ಷ ಈಗಾಗಲೇ ಮಧುಗಿರಿ ಮತ್ತು ಪಾವಗಡದಲ್ಲಿ ಅಭಿಯಾನ ಯಶಸ್ವಿಗೊಳಿಸಲಾಗಿದೆ. ಜಿಲ್ಲೆಯ ಇತರ ಎಲ್ಲಾ ಕೋವಿಡ್ ಆಸ್ಪತ್ರೆಗಳು, ಆರೈಕೆ ಕೇಂದ್ರಗಳಿಗೆ ಈ ಅಭಿಯಾನ ವಿಸ್ತರಿಸಲಾಗಿದೆ. ಈಗಾಗಲೇ 200, 160 ಮತ್ತು 120 ಕೆಜಿ ಚಿಕ್ಕಿಯನ್ನು ಪಾವಗಡ, ಮಧುಗಿರಿ ಮತ್ತು ಕುಣಿಗಲ್ ಆಸ್ಪತ್ರೆಗಳಿಗೆ ಒದಗಿಸಲಾಗಿದೆ ಎಂದು ತಿಳಿಸಿದರು.