ಕೊರಟಗೆರೆ:
ಕೊರೋನಾ ರೋಗಿಗಳಿಗೆ ಚಿಕಿತ್ಸೆ ಯೊಂದಿಗೆ ಮಾನಸಿಕ ಧೈರ್ಯ ತುಂಬುವ ಕೆಲಸ ಮಾಡಿ ಎಂದು ಶಾಸಕ ಡಾ.ಜಿ.ಪರಮೇಶ್ವರ್ ವೈದ್ಯರುಗಳಿಗೆ ಸಲಹೆ ನೀಡಿದರು.
ಕೋವಿಡ್ ರೋಗಕ್ಕೆ ಸಂಬಂಧಿಸಿದಂತೆ, ತಹಶೀಲ್ದಾರ್, ತಾಲ್ಲೂಕು ವೈದ್ಯಾದಿಕಾರಿ, ಪಿಹೆಚ್‍ಸಿ ವೈದ್ಯರುಗಳು, ಅಧಿಕಾರಿಗಳ ವೈಯಕ್ತಿಕ ಸಂಭಾಷಣೆಯನ್ನು ವೀಡಿಯೋ ಸಂವಾದದ ಮುಖಾಂತರ ಮಾಹಿತಿ ಪಡೆದು ಆದೇಶಿಸಿದರು. ತಾಲ್ಲೂಕಿನಲ್ಲಿ ಸೋಂಕಿಗೆ ಒಳಗಾಗುವುದನ್ನು ತಪ್ಪಿಸಲು ಕಾನೂನು ಮುಖಾಂತರ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿ, ಕೊರೋನಾ ರೋಗಿಗಳು ಸಾವಿನಿಂದ ತಪ್ಪಿಸಲು ಸಾಕಷ್ಟು ಮುಂಜಾಗ್ರತಾ ಕ್ರಮ ಮತ್ತು ಅಗತ್ಯ ಚಿಕಿತ್ಸೆಯನ್ನು ನೀಡುವಂತೆ ರೋಗಿಗಳ ಬಗ್ಗೆ ನಿರಂತರ ನಿಗಾ ಇಡುವಂತೆ ಆದೇಶಿಸಿದರು.
ವೈದ್ಯರು ಕೊರೋನಾ ರೋಗಿಗಳಿಗೆ ಚಿಕಿತ್ಸೆಯೊಂದಿಗೆ ಮಾನಸಿಕ ಧೈರ್ಯ ತುಂಬುವ ಕೆಲಸ ಮಾಡಲೇ ಬೇಕಿದ್ದು ಇದರಿಂದಾಗಿ ಸೋಂಕಿತರು ಅರ್ಧಗುಣವಾದಂತೆ ಆಗುತ್ತದೆ ಎಂದು ಸಲಹೆ ನೀಡಿದ್ದಾರೆ. ಪ್ರಸ್ತುತ ಆಸ್ಪತ್ರೆಗಳಲ್ಲಿ ಆಮ್ಲಜನಕದ ದಾಸ್ತಾನು ಬಗ್ಗೆ ಮಾಹಿತಿ ಪಡೆದು ಇದರ ಕೊರತೆಯಾಗದಂತೆ ನೋಡಿಕೊಳ್ಳಬೇಕು. ದಿನಕ್ಕೆ ಎರಡು ಭಾರಿ ನನಗೆ ಇದರ ಸಂಪೂರ್ಣ ಮಾಹಿತಿ ನೀಡಬೇಕು. ಹಾಗೂ ಕೋವಿಡ್ ಕಿಟ್‍ಗಳನ್ನು ಸೋಂಕಿತರಿಗೆ ನೀಡಿರುವ ಬಗ್ಗೆ ಮಾಹಿತಿ ಪಡೆದರು. ತಾಲ್ಲೂಕಿನಲ್ಲಿ ಹೋಂ ಐಸೋಲೇಷನ್‍ನಲ್ಲಿರುವ ಸೋಂಕಿತರ ಬಗ್ಗೆ ಅಧಿಕಾರಿಗಳು ಎಚ್ಚರದಿಂದ ಕಾರ್ಯ ನಿರ್ವಹಿಸಬೇಕು. ಅವರ ಮನೆಯ ಪರಿಸ್ಥಿತಿ ಮತ್ತು ವಾತವರಣವನ್ನು ಪರೀಕ್ಷಿಸಿದ ಮೇಲಷ್ಟೆ ಅಧಿಕಾರಿಗಳು ಅವರನ್ನು ಹೋಂ ಕ್ವಾರಂಟೈನಲ್ಲಿಡಬೇಕು. ಇಲ್ಲವಾದ್ದಲ್ಲಿ ಅವರನ್ನು ಮನವೊಲಿಸಿ ಕೋವಿಡ್ ಕೇರ್‍ಸೆಂಟರ್‍ಗೆ ದಾಖಲಿಸಿಕೊಳ್ಳಬೇಕು. ಹೋಂ ಐಸೋಲೇಷನ್‍ನಲ್ಲಿರುವವರು 20 ದಿನಗಳ ಕಾಲ ಹೊರಗಡೆ ತಿರುಗಾಡದಂತೆ ಹಾಗೂ ಇತರರೊಂದಿಗೆ ಸಂಪರ್ಕ ಹೊಂದದಂತೆ ತಿಳಿಸಿ ಸುಮಾರು 2.30 ಗಂಟೆಗಳ ಕಾಲ ವೀಡಿಯೋ ಸಂವಾದವನ್ನು ಅಧಿಕಾರಿಗಳೊಂದಿಗೆ ನಡೆಸಿದರು.
ವೀಡಿಯೋ ಸಂವಾದದಲ್ಲಿ ತಹಶೀಲ್ದಾರ್ ಗೋವಿಂದರಾಜು, ತಾ.ಪಂ ಇಒ ಶಿವಪ್ರಕಾಶ್, ಸಿಪಿಐ ಸಿದ್ದರಾಮೇಶ್ವರ, ಮುಖ್ಯಾಧಿಕಾರಿ ಲಕ್ಷ್ಮಣ್‍ಕುಮಾರ್, ಟಿಹೆಚ್‍ಒ ವಿಜಯ್ ಕುಮಾರ್, ವೈದ್ಯಾಧಿಕಾರಿ ಪ್ರಕಾಶ್, ಇತರೆ ಎಲ್ಲಾ ಪಿಹೆಚ್‍ಸಿ ವೈದ್ಯಾಧಿಕಾರಿಗಳು ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.