ತುಮಕೂರು:
ಜಿಲ್ಲಾಸ್ಪತ್ರೆಯಲ್ಲಿ ಪ್ಲೋರೆನಿಸಿಕ್ ಲ್ಯಾಬ್ ಹಾಗೂ ಮರಣೋತ್ತರ ಪರೀಕ್ಷೆ ತಜ್ಞರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ರುದ್ರಮೂರ್ತಿ ಅವರ ವರ್ಗಾವಣೆಯನ್ನು ರದ್ದುಗೊಳಿಸಿ, ತುಮಕೂರು ಜಿಲ್ಲಾಸ್ಪತ್ರೆ ಯಲ್ಲಿಯೇ ಮುಂದುವರೆಸುವಂತೆ ಚಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷ ಟಿ.ಎಸ್.ಗೌಸ್‍ಪಾಷಶೇಖ್ ಅವರ ನೇತೃತ್ವದಲ್ಲಿ ನಾಗರಿಕರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಕಳೆದ 10 ವರ್ಷಗಳಿಂದಲೂ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ವಿಭಾಗ ಹಾಗೂ ಬೆರಳಚ್ಚು ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ರುದ್ರಮೂರ್ತಿ ಅವರ ಸೇವೆ ಅನನ್ಯ, ಸಾರ್ವಜನಿಕರಿಗೆ ಸ್ಪಂದಿಸಿ ಕೆಲಸ ಮಾಡುತ್ತಿದ್ದಾರೆ. ಸಾವನ್ನಪ್ಪಿದವರ ಸಂಬಂಧಿಕರ ಕೋರಿಕೆಯ ಮೇರೆಗೆ ತಡರಾತ್ರಿಯಾದರೂ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಹಸ್ತಾಂತರಿಸಿರುವ ಉದಾಹರಣೆ ಇದೆ. ಇವರ ಸೇವೆ ಇನ್ನು ಎರಡುವರೆ ವರ್ಷ ಬಾಕಿ ಇರುವ ವೇಳೆ ಸರಕಾರ ಜಿಲ್ಲಾ ಸರ್ಜನ್ ಆಗಿ ಮುಂಬಡ್ತಿ ನೀಡಿ ಬೇರೆ ಜಿಲ್ಲೆಗೆ ವರ್ಗಾಯಿಸಿದೆ. ಇವರ ಸೇವೆ ಜಿಲ್ಲಾಸ್ಪತ್ರೆಗೆ ಅಗತ್ಯ ಇರುವುದರಿಂದ ಅವರನ್ನು ತುಮಕೂರು ಜಿಲ್ಲೆಯಲ್ಲಿಯೇ ಮುಂದುವರೆಸಬೇಕೆಂಬುದು ನಮ್ಮಂತಹ ಹಲವರ ಬೇಡಿಕೆ ಯಾಗಿದೆ ಎಂದು ಚಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷ ಟಿ.ಎಸ್.ಗೌಸ್‍ಪಾಷ ಶೇಖ್ ತಿಳಿಸಿದರು.
ಮಾನವ ಹಕ್ಕುಗಳ ಹೋರಾಟ ಸಮಿತಿ ಸದಸ್ಯ ಹಾಗೂ ವೆಲ್ಫೇರ್ ಪಾರ್ಟಿ ಅಫ್ ಇಂಡಿಯಾದ ಜಿಲ್ಲಾಧ್ಯಕ್ಷ ತಾಜುದ್ದೀನ್ ಷರೀಫ್ ಮಾತನಾಡಿ, ಡಾ.ರುದ್ರಮೂರ್ತಿ ಬಡವರಿಗೆ ಸ್ಪಂದಿಸಿ ಕೆಲಸ ಮಾಡುವ ವ್ಯಕ್ತಿಯಾಗಿದ್ದಾರೆ.ಎಷ್ಟೋ ಸಂದರ್ಭದಲ್ಲಿ ರೋಗಿಗಳ ಸಂಬಂಧಿಕರ ಸಂಕಷ್ಟ ನೋಡಲಾರದೆ ದೇಹದ ದಣಿವನ್ನು ಲಕ್ಕಿಸದೆ ಮರಣೋತ್ತರ ಪರೀಕ್ಷೆ ನಡೆಸಿ, ಸಹಕರಿಸಿದ್ದಾರೆ. ಅಲ್ಲದೆ ಕೋವಿಡ್‍ನಂತಹ ಸಂದರ್ಭದಲ್ಲಿ ಇವರು ವರ್ಗಾವಣೆಯಾದರೆ ಜಿಲ್ಲಾಸ್ಪತ್ರೆಯ ಸೇವೆಯಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಹಾಗಾಗಿ ಡಾ.ರುದ್ರಮೂರ್ತಿ ಅವರ ವರ್ಗಾವಣೆಯನ್ನು ಕೈಬೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸರಕಾರವನ್ನು ಮನವಿ ಮಾಡಲಾಗುವುದು ಎಂದರು.
ಈ ವೇಳೆ ಸಾರ್ವಜನಿಕರಾದ ಸಿರಾಜ್, ಸುಹೇಲ್, ನಾಗೇಶ್, ರಮೇಶ್, ಅರ್ಬಾರ್, ವಿನೋದ್, ಅಭಿ, ಫಾರೂಕ್‍ಸಾಬ್, ಮಹಮದ್ ಆಲಿ, ಮೆಹಬೂಬ್ ಇದ್ದರು.