ತುಮಕೂರು:
ನಗರದ ಅಂತರಸನಹಳ್ಳಿ ತರಕಾರಿ ಮಾರುಕಟ್ಟೆಯಲ್ಲಿ ರಸ್ತೆ, ಚರಂಡಿ ನಿರ್ಮಾಣ ಮಾಡಲು ಜೆಸಿಬಿಯಿಂದ ಆವರಣದ ರಸ್ತೆಗಳನ್ನು ಅಗೆದ ಕಾರಣ, ವ್ಯಾಪಾರ ವಹಿವಾಟಿಗೆ ಅಡಚಣೆಯಾಗಿ ಗುರುವಾರ ವ್ಯವಹಾರ ಚಟುವಟಿಕೆಗಳು ಅಸ್ತವ್ಯಸ್ತವಾದವು.
ಕಾಮಗಾರಿ ಆರಂಭಿಸುವ ಬಗ್ಗೆ ಇಲ್ಲಿನ ವರ್ತಕರಿಗೆ ಮಾಹಿತಿ ನೀಡದೆ, ವ್ಯಾಪಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡದೆ ಏಕಾಏಕಿ ಕಾಮಗಾರಿಗೆ ಮುಂದಾಗಿರುವ ಬಗ್ಗೆ ವರ್ತಕರು ಎಪಿಎಂಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಳೆಗಾಲದಲ್ಲಿ ಮಳೆ ನೀರು ಮಾರುಕಟ್ಟೆ ಒಳಗೆ ನುಗ್ಗಿ ಅವಾಂತರವಾಗುತ್ತಿತ್ತು. ಇಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲ. ಹೀಗಾಗಿ, ಎಪಿಎಂಸಿಯಿಂದ ಸುವ್ಯವಸ್ಥಿತ ಚರಂಡಿ ನಿರ್ಮಿಸಿ, ಆವರಣದಲ್ಲಿ ಸಿಮೆಂಟ್ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ.
ಮಾರುಕಟ್ಟೆ ಅಭಿವೃದ್ಧಿಗೆ ನಾವು ವಿರೋಧ ಮಾಡುವುದಿಲ್ಲ, ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಆಗಬೇಕು ಎಂಬ ಒತ್ತಾಯ ಮಾಡುತ್ತಲೇ ಬಂದಿದ್ದೇವೆ. ಆದರೆ, ಕಾಮಗಾರಿ ಆರಂಭಿಸುವ ಮೊದಲು ಇಲ್ಲಿನ ವ್ಯಾಪಾರಿಗಳಿಗಾಗಲಿ, ವ್ಯಾಪಾರಿಗಳ ಸಂಘಕ್ಕಾಗಲಿ ಎಪಿಎಂಸಿ ಅಧಿಕಾರಿಗಳು ಮಾಹಿತಿ ನೀಡಿಲ್ಲ, ಜೆಸಿಬಿ ತಂದು ದಿಡೀರನೆ ಆವರಣದ ರಸ್ತೆಗಳನ್ನು ಅಗೆದು ಹೋಗಿದ್ದಾರೆ. ಗ್ರಾಹಕರ ಓಡಾಟಕ್ಕೂ ತೊಂದರೆಯಾಗಿದೆ. ವ್ಯಾಪಾರಕ್ಕೂ ಅನಾನುಕೂಲವಾಗಿದೆ. ಹೀಗಾಗಿ ವ್ಯಾಪಾರ ವಹಿವಾಟು ಅಸ್ತವ್ಯಸ್ತವಾಗಿದೆ ಎಂದು ವ್ಯಾಪಾರಿಗಳು ಎಪಿಎಂಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಾರುಕಟ್ಟೆಯಲ್ಲಿ ಅಭಿವೃದ್ಧಿ ಕಾಮಗಾರಿ ಆರಂಭಿಸುವ ಮೊದಲು ಅಧಿಕಾರಿಗಳು ವರ್ತಕರಿಗೆ ವಿಷಯ ತಿಳಿಸಬೇಕಾಗಿತ್ತು. ವ್ಯಾಪಾರಕ್ಕೆ ಪರ್ಯಾಯ ಜಾಗ ಗುರುತಿಸಿ, ಅಗತ್ಯ ಅನುಕೂಲ ಮಾಡಿಕೊಡಬೇಕಾಗಿತ್ತು ಎಂದು ಮಾರುಕಟ್ಟೆಯ ಹಣ್ಣು, ತರಕಾರಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಘುರಾಮ್ ಹೇಳಿದರು.
ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಬೆಳಿಗ್ಗೆ 10 ಗಂಟೆವರೆಗೆ ಮಾತ್ರ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸಲು ಅವಕಾಶ ಮಾಡಲಾಗಿದೆ. ಹೀಗಾಗಿ, ಮಾರುಕಟ್ಟೆಗೆ ತರಕಾರಿ ತರುವ ರೈತರಿಗೆ ಹಾಗೂ ವ್ಯಾಪಾರಿಗಳಿಗೆ ಅನಾನುಕೂಲವಾಗಿದೆ. ರೈತರ ಉತ್ಪನ್ನಗಳಿಗೂ ಬೆಲೆ ಸಿಗುತ್ತಿಲ್ಲ, ವ್ಯಾಪಾರಿಗಳಿಗೂ ವ್ಯವಹಾರ ನಡೆಯುತ್ತಿಲ್ಲ ಎನ್ನುವಂತಾಗಿ ಸಮಸ್ಯೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಎಪಿಎಂಸಿ ಅಧಿಕಾರಿಗಳು ಕಾಮಗಾರಿ ನೆಪದಲ್ಲಿ ಮತ್ತಷ್ಟು ತೊಂದರೆ ಮಾಡುತ್ತಿದ್ದಾರೆ ಎಂದು ನಗರಸಭೆ ಮಾಜಿ ಅಧ್ಯಕ್ಷ, ಮಾರುಕಟ್ಟೆ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಟಿ.ಹೆಚ್.ಜಯರಾಂ ಹೇಳಿದರು. iÁಡುವ ಬೆದರಿಕೆ ಹಾಕಿ, ದೌರ್ಜನ್ಯದಿಂದ ಕಾಮಗಾರಿ ಆರಂಭಿಸಿದ್ದಾರೆ. ವ್ಯಾಪಾರಕ್ಕೆ ನಮಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಈ ಸಂಬಂಧ ಎಪಿಎಂಸಿ ಕಾರ್ಯದರ್ಶಿಗಳಿಗೆ ಮನವಿ ಪತ್ರ ನೀಡಿ, ವ್ಯಾಪಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಕೋರುವುದಾಗಿ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಮುತ್ತುರಾಯಪ್ಪ ಹೇಳಿದರು.