ಹುಳಿಯಾರು:
ರಸ್ತೆ ಅಪಘಾತದಲ್ಲಿ ಮೃತರಾದ ರಾಷ್ಟ್ರಪ್ರಶಸ್ತಿ ಪುರಸ್ಕøತ ಸಿನಿಮಾ ನಟ ಸಂಚಾರಿ ವಿಜಯ್ ಅವರ ಪಾರ್ಥಿವ ಶರೀರವು ಹುಟ್ಟೂರಿಗೆ ಹುಳಿಯಾರು ಮಾರ್ಗವಾಗಿ ತೆರಳಿತು. ಹುಳಿಯಾರಿನಲ್ಲಿ ವಿಜಯ್ ಅವರ ಪಾರ್ಥಿವ ಶರೀರ ವೀಕ್ಷಣೆಗೆ ಕಿಕ್ಕಿರಿದು ಜನ ಸೇರಿದ್ದರು.
ವಿಜಯ್ ಅವರು ಹುಟ್ಟೂರಾದ ಪಂಚನಹಳ್ಳಿಗೆ ಅಂತ್ಯಸಂಸ್ಕಾರಕ್ಕೆ ಪಾರ್ಥಿವ ಶರೀರವನ್ನು ಹುಳಿಯಾರು ಮಾರ್ಗದಲ್ಲಿ ತೆರಳುತ್ತದೆಂದು ತಿಳಿದ ಅಭಿಮಾನಿಗಳು ಇಲ್ಲಿನ ಪೊಲೀಸ್ ಸ್ಟೇಷನ್ ಸರ್ಕಲ್ ಬಳಿ ಮಧ್ಯಾಹ್ನ ಹನ್ನೆರಡು ಗಂಟೆಯಿಂದಲೇ ಅಂತಿಮ ದರ್ಶನ ಪಡೆಯಲು ಕಾದು ನಿಂತಿದ್ದರು.
ಶಿರಾ ಮಾರ್ಗವಾಗಿ ಬರುವಾಗ ಬೆಳ್ಳಾರ, ಹೊಯ್ಸಲಕಟ್ಟೆಯಲ್ಲೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದ್ದರಿಂದ ಹುಳಿಯಾರಿ ನಿಗಧಿ ಸಮಯಕ್ಕಿಂತ 1 ಗಂಟೆ ತಡವಾಗಿ ಆಗಮಿಸಿತ್ತು. ಹಾಗಾಗಿ ನಿರೀಕ್ಷೆಗೂ ಮೀರಿ ಅಭಿಮಾನಿಗಳು ಸೇರಿದ್ದರು.
ಪೊಲೀಸರಿಗೆ ಜನಸಂದಣಿ ಕಂಟ್ರೋಲ್ ಮಾಡುವುದು ಸವಾಲಿನ ಕೆಲಸವಾಗಿತ್ತು. ಪದೇ ಪದೇ ದೂರದೂರ ನಿಂತು ಸಾಮಾಜಿಕ ಅಂತರ ಕಾಪಾಡುವಂತೆ ಮನವಿ ಮಾಡಿದ್ದರೂ ಕೇಳದೆ ಗುಂಪು-ಗುಂಪಾಗಿ ನಿಂತಿದ್ದರು. ಪರಿಣಾಮ ಹೆಚ್ಚುವರಿ ಸಿಬ್ಬಂದಿಗಳನ್ನು ಕರೆಸಿ ಕೈಗೆ ಲಾಠಿ ಹಿಡಿದುಕೊಂಡಾಗ ಸ್ವಲ್ಪ ಹತೋಟಿಗೆ ಬಂದಿತು.
ಭಾರಿ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರಿಂದ ಹೆಚ್ಚು ಕಾಲ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸದೆ ಹಾರ ಹಾಕುವುದಕ್ಕೆ ಮಾತ್ರ ಅವಕಾಶ ಕೊಟ್ಟರು. ಮಾತಾ ಟ್ರಸ್ಟ್, ಕರವೇ, ಜಯಕರ್ನಾಟಕ ಸೇರಿದಂತೆ ಕೆಲ ಸಂಘಸಂಸ್ಥೆಯವರು, ಸಿನಿಮಾ ಕಲಾವಿದ ಗೌಡಿ ಪಾರ್ಥಿವ ಶರೀರಕ್ಕೆ ಹಾರ ಹಾಕಿ ಅಂತಿಮ ಗೌರವ ಸಲ್ಲಿಸಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ, ಕಡೂರು ಮಾಜಿ ಶಾಸಕ ವೈ.ಎಸ್.ವಿ.ದತ್ತ, ವಿಜಯ ನಟನೆಯ ಅವನಲ್ಲ ಅವಳು ಚಿತ್ರದ ನಿರ್ದೇಶಕ ಬಿ.ಎಸ್.ಲಿಂಗದೇವರು ಕೂಡ ಪಾರ್ಥಿವ ಶರೀರದೊಟ್ಟಿಗೆ ಹುಳಿಯಾರಿಗೆ ಆಗಮಿಸಿದ್ದರು.