ಚಿಕ್ಕನಾಯಕನಹಳ್ಳಿ:
ತಾಲ್ಲೂಕಿನ ಬೊರನಕಣವೆಗೆ ಜಲಾಶಯಕ್ಕೆ ನೀರು ತುಂಬಿಸುವ ಸಾಧ್ಯತೆಗಾಗಿ ಸಚಿವ ಜೆ.ಸಿ. ಮಾಧುಸ್ವಾಮಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಸರ್ವೆಗಾಗಿ ಗಂಟೇನಹಳ್ಳಿ ಬಳಿ ಸ್ಥಳ ಪರಿಶೀಲನೆ ನಡೆಸಿದರು.
ತಾಲ್ಲೂಕಿನ ಹೆಗ್ಗಳಿಕೆಯೊಂದಾದ ಬೋರನಕಣಿವೆ ಜಲಾಶಯ ಹೆಸರಿಗಷ್ಟೆ ಜಲಾಶಯವಾದರೂ ನೀರಿನ ಹರಿವಿನ ಕೊರತೆಯಿಂದಾಗಿ ಇದುವರೆಗೂ ಬೆರಳೆಣಿಕೆಯಷ್ಟು ಸಲ ತುಂಬಿದೆ. ಈ ಕೊರತೆ ನೀಗಿಸುವ ಉದ್ದೇಶದಿಂದ ಈ ಜಲಾಶಯಕ್ಕೆ 2.3 ಟಿಎಂಸಿ ನೀರಿನ ಅಗತ್ಯವಿದ್ದು, ಭದ್ರಾ ಮೇಲ್ದಂಡೆ ಹಾಗೂ ಹೇಮಾವತಿ ನಾಲೆಯಿಂದ 1.33 ಟಿಎಂಸಿ ಯಷ್ಟು ನೀರನ್ನು ನಿಗಧಿ ಮಾಡಿದ್ದು, ಉಳಿದ 1 ಟಿಂಎಂಸಿ ನೀರಿನ ಲಭ್ಯತೆಗಾಗಿ ಎತ್ತಿನಹೊಳೆ ಹಾಗೂ ಇನ್ನಿತರ ಜಲಮೂಲದಿಂದ ನೀರನ್ನು ಪಡೆಯುವ ಕುರಿತಾಗಿ ಸಣ್ಣ ನೀರಾವರಿ ಸಚಿವರಾದ ಜೆ.ಸಿ. ಮಾಧುಸ್ವಾಮಿಯವರು ತಾಲ್ಲೂಕಿನ ಗಂಟೇನಹಳ್ಳಿ ಭಾಗದಲ್ಲಿ ಅಧಿಕಾರಿಗಳೊಂದಿಗೆ ಸ್ಥಳಪರಶೀಲನೆ ನಡೆಸಿದರು. ಗಂಟೇನಹಳ್ಳಿಯಿಂದ ಬೋರನಕಣಿವೆಯವರೆಗೆ 250 ಕ್ಯೂಸೆಕ್ಸ್ ನೀರು ಹರಿಯುವ 9 ಕಿಮೀಗಳ ಫೀಡರ್ ಚಾನೆಲ್ ಮಾಡುವುದರಿಂದ ಈ ಭಾಗದ ಹೆಚ್ಚಿನ ನೀರು ಗಾಯಿತ್ರಿ ಜಲಾಶಯಕ್ಕೆ ಹರಿಯುವದನ್ನು ತಪ್ಪಿಸಿ ಬೊರನ ಕಣಿವೆ ಜಲಾಶಯಕ್ಕೆ ಹರಿಯುವ ಸಾಧ್ಯತೆಯ ಬಗ್ಗೆ ಇಲಾಖೆಯ ಇಂಜಿನಿಯರ್‍ಗಳೊಂದೊಗೆ ಚರ್ಚಿಸಿದರು. ತಿಮ್ಮನಹಳ್ಳಿ ಗುಡ್ಡಭಾಗ ಹಾಗೂ ಬಡಕೆಗುಡ್ಲು ಭಾಗದ ಹಳ್ಳಗಳ ಆಧುನೀಕರಣದಿಂದ ಗುರುತ್ವಾಕರ್ಷಣೆಯ ಮೂಲಕ ನೀರು ಸಂಗ್ರಹದಿಂದ ಈ ಭಾಗದ ಅಂತರ್ಜಲದ ಅಭಿವೃದ್ದಿ ಆಗುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ರವಿಸೂರನ್ ಹಾಗೂ ನಾಗರಾಜ್, ಪ್ರಭಾಕರ್ ಹಾಗೂ ಸುತ್ತಮುತ್ತ ಗ್ರಾಮಸ್ಥರು ಹಾಜರಿದ್ದರು.