ಕೊರಟಗೆರೆ:
ಅಲೆಮಾರಿ ಕೂಲಿ ಕಾರ್ಮಿಕ ಕುಟುಂಬ ವಾಸಿಸುತ್ತಿರುವ ಗುಡಿಸಲಿನಲ್ಲಿ ಯಾರು ಇಲ್ಲದ ವೇಳೆ ಆಕಸ್ಮಿಕವಾಗಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಮೂರು ಗುಡಿಸಲು, ದ್ವಿಚಕ್ರ ವಾಹನ ಮತ್ತು ದವಸದಾನ್ಯ ಬೆಂಕಿಗೆ ಆಹುತಿ ಆಗಿರುವ ಘಟನೆ ಭಾನುವಾರ ಮುಂಜಾನೆ ನಡೆದಿದೆ.
ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾಪಂ ವ್ಯಾಪ್ತಿಯ ಚಿಂಪುಗಾನಹಳ್ಳಿ ಗ್ರಾಮದ ಸಮೀಪ ಅಲೆಮಾರಿ ಕೂಲಿ ಕಾರ್ಮಿಕ ಕುಟುಂಬ ವಾಸಿಸುತ್ತಿರುವ ಗುಡಿಸಲಿನಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟದಿಂದ 1ಲಕ್ಷ ಮೌಲ್ಯದ ದವಸದಾನ್ಯ ನಾಶವಾಗಿದೆ.
ಚಿಂಪುಗಾನಹಳ್ಳಿ ಕೂಲಿ ಕಾರ್ಮಿಕ ಹನುಮಂತರಾಯಪ್ಪ ಮಾತನಾಡಿ, ನಮಗೆ ಸ್ವಂತ ಮನೆಯೇ ಇಲ್ಲ. ಕಳೆದ 20ವರ್ಷದಿಂದ ಗುಡಿಸಲಿನ ಗುಡಾರವೇ ನಮ್ಮ ಅರಮನೆ ಆಗಿದೆ. ನಾವು ವಾಸಿಸುವ ಕುಟುಂಬ ಮತ್ತು ನಮ್ಮ ಮಕ್ಕಳಿಗೆ ಸಮರ್ಪಕ ಭದ್ರತೆ ಇಲ್ಲದಿರುವ ಪರಿಣಾಮ ಆಕಸ್ಮಿಕವಾಗಿ ಗ್ಯಾಸ್ ನಿಲಿಂಡರ್ ಸಿಡಿದು 3 ಗುಡಿಸಲು ಸುಟ್ಟು ಭಸ್ಮವಾಗಿ 1 ಲಕ್ಷಕ್ಕೂ ಅಧಿಕ ನಮಗೆ ನಷ್ಟವಾಗಿದೆ ಎಂದು ತಿಳಿಸಿದರು.
ಕೊರಟಗೆರೆ ಎಂಎನ್‍ಜೆ ಗ್ರೂಪ್ ಮಾಲೀಕ ಮಂಜುನಾಥ ಮಾತನಾಡಿ ಅಲೆಮಾರಿ ಕೂಲಿ ಕಾರ್ಮಿಕ ಕುಟುಂಬಕ್ಕೆ ಸರಕಾರದ ಭದ್ರತೆಯೇ ಮರೀಚಿಕೆ ಆಗಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಸ್ಪೋಟಗೊಂಡ ಪರಿಣಾಮ ಅನಾಹುತ ತಪ್ಪಿದೆ. ಗ್ಯಾಸ್ ಸ್ಪೋಟದಿಂದ ನಷ್ಟಗೊಂಡ ಕುಟುಂಬಕ್ಕೆ ನಮ್ಮ ಕೈಲಾದ ಸಹಾಯಹಸ್ತ ಚಾಚಿದ್ದೇನೆ. ಸರಕಾರ ತಕ್ಷಣ ಬಡ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಒತ್ತಾಯ ಮಾಡಿದರು.
ಆಕಸ್ಮಿಕ ಗ್ಯಾಸ್ ಸಿಲಿಂಡರ್ ಸ್ಪೋಟದಿಂದ ನಷ್ಟವಾದ ಚಿಂಪುಗಾನಹಳ್ಳಿ ಗ್ರಾಮದ ಹನುಮಂತರಾಯಪ್ಪ ಮತ್ತು ಮೂರ್ತಪ್ಪ ಕುಟುಂಬಕ್ಕೆ ಕೊರಟಗೆರೆ ಡಾ.ಜಿ.ಪರಮೇಶ್ವರ ಅಭಿಮಾನಿ ಬಳಗದಿಂದ ಎಂಎನ್‍ಜೆ ಮಂಜುನಾಥ ಧನಸಹಾಯ ನೀಡಿ ರಾಜ್ಯ ಸರಕಾರದಿಂದ ಪರಿಹಾರ ನೀಡುವಂತೆ ಒತ್ತಾಯ ಮಾಡಿದರು.
ಬೇಟಿಯ ವೇಳೆಯಲ್ಲಿ ಮಾಜಿ ತಾಪಂ ಸದಸ್ಯ ಎಲ್.ವಿ.ಪ್ರಕಾಶ್, ಗ್ರಾಪಂ ಸದಸ್ಯ ಜಗದೀಶ್, ಶಿವಕುಮಾರ್, ಹರೀಶ್, ಮುಖಂಡರಾದ ಆಟೋ ಕುಮಾರ್, ನಟರಾಜು, ಪವನ ಶ್ರೀರಾಮಯ್ಯ, ಲಕ್ಷ್ಮೀ ಪ್ರಸಾದ್, ರವಿಕುಮಾರ್, ಭಾನುಪ್ರಕಾಶ್, ನಾಗರಾಜು ಸೇರಿದಂತೆ ಇತರರು ಇದ್ದರು.