ಮಧುಗಿರಿ :
ಮಧುಗಿರಿ ತಾಲೂಕು ಅತ್ಯಂತ ಬರಪಿಡಿತ ಪ್ರದೇಶವಾಗಿದ್ದು, ಮುಂದಿನ 3 ವರ್ಷದೊಳಗೆ ತಾಲೂಕಿನ 1100 ಎಕರೆ ಪ್ರದೇಶದಲ್ಲಿ 85 ಸಾವಿರ ಕೋಟಿ ವೆಚ್ಚದಲ್ಲಿ ಜವಳಿ ಪಾಕ್ ನಿರ್ಮಾಣ ಸೇರಿದಂತೆ ಜೊತೆಗೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಜಿ.ಎಸ್. ಬಸವರಾಜು ಭರವಸೆ ನಿಡಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ, ಕಾರ್ಮಿಕ ಇಲಾಖೆ ಮತ್ತು ತಾಲೂಕು ಆಡಳಿತ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಆಹಾರ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡಿದ ಅವರು ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಮಧುಗಿರಿ ತಾಲೂಕು ಅತೀ ಹಿಂದುಳಿದ ತಾಲೂಕಾಗಿದ್ದು, ಪ್ರತಿ ನಿತ್ಯ ಸಾವಿರಾರು ಕಾರ್ಮಿಕರು ಉದ್ಯೋಗ ಅರಸಿ ದೊಡ್ಡಬಳ್ಳಾಪುರ, ಬೆಂಗಳೂರು ಸೇರಿದಂತೆ ಸುತ್ತಮುತ್ತಲ ನಗರಗಳಿಗೆ ಕುಟುಂಬಗಳನ್ನು ತೊರೆದು ಹೋಗುತ್ತಿದ್ದಾರೆ. ಇದನ್ನು ಮನಗಂಡು ತಾಲುಕಿನ ಜನತೆಗೆ ಉದ್ಯೋಗ ಒದಗಿಸಿಕೊಡುವ ಉದ್ದೇಶದಿಂದ ಇಡೀ ರಾಜ್ಯದಲ್ಲೇ ಒಂದು ಜಿಲ್ಲೆಗೆ ಮಾತ್ರ ನೀಡುವ ಜವಳಿ ಪಾರ್ಕ್‍ನ್ನು ಮಧುಗಿರಿಗೆ ತರಲು ಎಲ್ಲಾ ಸಿದ್ದತೆ ಮಾಡಿಕೊಂಡಿದ್ದು, ಮುಂದಿನ 3 ವರ್ಷದೊಳಗೆ ಯೋಜನೆಗೆ ಚಾಲನೆ ನೀಡಲು ಚಿಂತನೆ ನಡೆಸಲಾಗಿದೆ. ಈ ಯೋಜನೆ ಕಾರ್ಯರೂಪಕ್ಕೆ ಬಂದಲ್ಲಿ ಸುಮಾರು 75 ಸಾವಿರ ಜನರಿಗೆ ಉದ್ಯೋಗಾವಕಾಶ ದೊರೆಯಲಿದೆ. ಈ ಯೋಜನೆಗೆ ಈಗಾಗಲೇ ಸ್ಥಳವನ್ನೂ ಗುರುತಿಸಲಾಗಿದ್ದು, ಅದರ ವಿವರ ಈಗಲೇ ಹೇಳಿ ಬಿಟ್ಟರೆ ಕೆಲವರು ಅಭಿವೃದ್ದಿಗೆ ಅಡ್ಡಗಾಲು ಹಾಕುತ್ತಾರೆ ಎಂದು ಕುಟುಕಿದರು.
ಅಸಂಘಟಿತ ಕಾರ್ಮಿಕರು ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು 1 ಲಕ್ಷ ಕೋಟಿ ಅನುದಾನ ನೀಡಿ 85 ಕೋಟಿ ಕಾರ್ಮಿಕರು, ಮಧ್ಯಮ ವರ್ಗದವರಿಗೆ ಆಹಾರದ ಕಿಟ್‍ಗಳನ್ನು ವಿತರಿಸಲು ಕ್ರಮ ಕೈಗೊಂಡಿದ್ದಾರೆ. ಕಾರ್ಮಿಕ ಇಲಾಖೆ ವತಿಯಿಂದ ಜಿಲ್ಲೆಗೆ 7 ಸಾವಿರ ಆಹಾರದೆ ಕಿಟ್‍ಗಳನ್ನು ನೀಡಿದ್ದು, ಅತೀ ಹಿಂದುಳಿದ ಪ್ರದೇಶವಾಗಿರುವ ಮಧುಗಿರಿ ತಾಲೂಕಿಗೆ 3 ಸಾವಿರ ಕಿಟ್ ಗಳನ್ನು ನೀಡಿದ್ದೇನೆ. ತಾಲೂಕಿನ ಜನತೆ ನನಗೆ ಅತೀ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸಿದ್ದು, ಎತ್ತಿನಹೊಳೆ ಯೋಜನೆಯ ಮೂಲಕ ತಾಲೂಕಿನ ಕೆರೆಗಳಿಗೆ 1.5 ಟಿಎಂಸಿ ನೀರು ಹರಿಯಲಿದ್ದು, ಇದರ ಜೊತೆಗೆ ಗೂಬಲಗುಟ್ಟೆ ಸಮೀಪ ಡ್ಯಾಂ ನಿರ್ಮಿಸಿ ವಿವಿಧ ಮೂಲಗಳಿಂದ 3 ಟಿಎಂಸಿ ನೀರು ತಂದು ಒಟ್ಟು 4.5 ಟಿಎಂಸಿ ನೀರು ಸಂಗ್ರಹಿಸಿ ಪುರವರ ಬಳಿ ಕೆರೆ ಅಗಲೀಕರಣಗೊಳಿಸಿ ಹರಿಸಿದಲ್ಲಿ ತಾಲೂಕಿನ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತವಾದ ಪರಿಹಾರ ದೊರೆಯಲಿದ್ದು, ಈ ಮೂಲಕ ಕ್ಷೇತ್ರದ ಜನತೆಯ ಋಣ ತೀರಿಸುತ್ತೇನೆ ಎಂದರು. ಹಿಂದುಳಿದ ಪ್ರದೇಶವಾದ ಮಧುಗಿರಿ ಕ್ಷೇತ್ರದ ಅಭಿವೃದ್ದಿಗೆ ನನ್ನ ಮನಸ್ಸು ಮಿಡಿಯುತ್ತಿದೆ. ಆದರೆ ಕ್ಷೇತ್ರದ ಅಭಿವೃದ್ದಿಗೆ ಇಲ್ಲಿನ ಶಾಸಕರು ಸಹಕಾರ ನೀಡುತ್ತಿಲ್ಲ. ಕೇಂದ್ರದ ಪಿ.ಎಂ.ಜಿ.ಎಸ್.ವೈ ಯೋಜನೆಯನ್ನು ನಾನೇ ತಂದಿದ್ದೇನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಕಸಬಾ ವ್ಯಾಪ್ತಿಯ ಸಿದ್ದಾಪುರ ಕೆರೆಗೆ ಹೇಮಾವತಿ ನೀರು ಹರಿಸಲು ನಾನು ಬಹಳಷ್ಟು ಶ್ರಮ ವಹಿಸಿದ್ದು, ಹೇಮಾವತಿ ನೀರಿನ ಮೋಟರ್ ಪಂಪ್‍ಸೆಟ್ ಜಾಕ್ವೆಲ್ ಎಲ್ಲಿದೆ ಎಂಬುದೇ ಗೊತ್ತಿಲ್ಲದ ಇಲ್ಲಿನ ಶಾಸಕರು, ನನ್ನ ಮೇಲೆ ಪಂಪ್‍ಸೆಟ್ ಕಳುವು ಮಾಡಿಸಿರುವ ಆರೋಪ ಮಾಡುತ್ತಿದ್ದು, ಇವರು ಯಾರ ಸಹಕಾರದಿಂದ ಶಾಸಕರಾದರು ಎಂಬುದನ್ನು ಮೊದಲು ನೆನಪು ಮಾಡಿಕೊಳ್ಳಲಿ. ಮೋಟಾರ್ ಪಂಪ್‍ಸೆಟ್ ಕಳುವು ಮಾಡಿಸುವಷ್ಟು ಕೀಳು ಮಟ್ಟದ ರಾಜಕೀಯ ಮಾಡುವುದು ನನಗೆ ಗೊತ್ತಿಲ್ಲ. ಇವರಿಗೆ ನನ್ನ ಬೆಂಬಲ ಪಡೆದು ಕ್ಷೇತ್ರದ ಅಭಿವೃದ್ದಿ ಕೆಲಸಗಳನ್ನು ಮಾಡಿಸಿಕೊಳ್ಳುವುದು ಗೊತ್ತಿಲ್ಲ. ಅಧಿಕಾರಿಗಳು ಎಂ.ಎಲ್.ಎ ಆದರೆ ಹೀಗೆ ಸುಳ್ಳು ಹೇಳಿಕೊಂಡು ಓಡಾಡುತ್ತಾರೆ. ಜಿ.ಎಸ್. ಬಸವರಾಜು, ಸಂಸದ.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಕಲ್ಯಾಣಾಧಿಕಾರಿ ಸುಭಾಷ್, ಪುರಸಭಾಧ್ಯಕ್ಷ ತಿಮ್ಮರಾಜು, ಉಪಾಧ್ಯಕ್ಷೆ ರಾಧಿಕಾ ಆನಂದಕೃಷ್ಣ, ಕೇಂದ್ರದ ತೋಟಗಾರಿಕೆ ಇಲಾಖೆ ಅಧಿಕಾರಿ ಶಿವಪ್ರಸಾದ್, ಉಪ ತಹಶೀಲ್ದಾರ್ ವರದರಾಜು, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವ ಪ್ರಸಾದ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೆಬ್ಬಾಕ ರವಿ, ಪುರಸಭೆ ಸದಸ್ಯರಾದ ಲಾಲಾಪೇಟೆ ಮಂಜುನಾಥ್, ಸುಜಾತ, ನಟರಾಜು, ಆಸಿಯಾ ಬಾನು, ಮುಖಂಡರಾದ ಎಂ. ಎಸ್. ಶಂಕರ ನಾರಾಯಣ್, ಎಂ.ಜಿ. ಉಮೇಶ್, ಎಂ.ವಿ. ಮಂಜುನಾಥ್, ಎಂ.ಜಿ ಶ್ರೀನಿವಾಸ ಮೂರ್ತಿ ಇತರರಿದ್ದರು.