ತುಮಕೂರು :
ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ದಿನದ 24ಗಂಟೆಯೂ ಕಾರ್ಯನಿರ್ವಹಿಸುವ ಪೊಲೀಸರ ಒತ್ತಡ ನಿವಾರಣೆಗೆ ಕ್ರೀಡೆ ಸಹಕಾರಿ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಹೇಳಿದರು.
ನಗರದ ಜಿಲ್ಲಾ ಪೊಲೀಸ್ ಇಲಾಖೆಯ ಡಿಎಆರ್ ಮೈದಾನದಲ್ಲಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಬಲೂನ್ ಗಳನ್ನು ಹಾರಿ ಬಿಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಪೊಲೀಸರು ಸಮಾಜದಲ್ಲಿ ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸದೆ ಕಾರ್ಯನಿರ್ವಹಿಸುತ್ತಾರೆ. ಸದಾ ಒತ್ತಡದಲ್ಲಿ ಕೆಲಸ ಮಾಡುವ ಪೊಲೀಸರಿಗೆ ವರ್ಷಕ್ಕೊಮ್ಮೆ ಇಂತಹ ಕ್ರೀಡಾ ಕೂಟಗಳನ್ನು ಆಯೋಜಿಸುವುದು ತುಂಬಾ ಆರೋಗ್ಯಕರ ಬೆಳವಣಿಗೆ ಎಂದರು.
ನಿಂದನೆಗಳು, ಸೋಲು-ಗೆಲುವು ಎದುರಾದಾಗ ಯಾವ ರೀತಿ ಎದುರಿಸಬೇಕು ಎಂಬುದನ್ನು ಕ್ರೀಡೆ ಕಲಿಸುತ್ತದೆ ಎಂದರು.
ಸಮಯ, ಶಿಸ್ತು ಪಾಲನೆ ಜೊತೆಗೆ ಧೈರ್ಯವನ್ನು ಪೊಲೀಸ್ ಇಲಾಖೆ ಕಲಿಸುತ್ತದೆ ಎಂದು ಅವರು ತಿಳಿಸಿದರು.
ವರ್ಷಪೂರ್ತಿ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ಪೊಲೀಸರು ಕ್ರೀಡೆಯನ್ನು ಮೈಗೂಡಿಸಿಕೊಳ್ಳುವುದು ಅನಿವಾರ್ಯ ಎಂದ ಅವರು, ಕ್ರೀಡಾಕೂಟದಲ್ಲಿ ವ್ಯಕ್ತಿ ಗೆಲ್ಲುವುದಕ್ಕಿಂತ ಕ್ರೀಡೆ ಗೆಲ್ಲುವುದು ಬಹಳ ಮುಖ್ಯ ಎಂದರು.
ಸಮಾಜದಲ್ಲಿ ನಡೆಯುವ ಅನ್ಯಾಯ ದೌರ್ಜನ್ಯಗಳನ್ನು ತಡೆಯಲು ಪೊಲೀಸ್ ಇಲಾಖೆ ಗಟ್ಟಿಯಾಗಿ ನಿಲ್ಲಬೇಕು ಎಂದರು.
ಕ್ರೀಡೆ ಕೇವಲ ಪೊಲೀಸ್ ಇಲಾಖೆಗೆ ಮಾತ್ರ ಸೀಮಿತವಲ್ಲ, ಪ್ರತಿಯೊಬ್ಬ ವ್ಯಕ್ತಿಗೂ ಕ್ರೀಡೆ ಮುಖ್ಯ ಎಂದು ಅವರು ಹೇಳಿದರು.
ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಜವಾಬ್ದಾರಿ ಮಹತ್ವದ್ದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಉಪವಿಭಾಗಗಳ ಪೊಲೀಸರಿಂದ ಆಕರ್ಷಕ ಪಥಸಂಚಲನ ನಡೆಯಿತು.
ಸಮಾರಂಭದಲ್ಲಿ ಅಡಿಷನಲ್ ಎಸ್ಪಿ ಉದೇಶ್, ಡಿವೈಎಸ್ಪಿ ಶ್ರೀನಿವಾಸ್, ರಮೇಶ್ ಸೇರಿದಂತೆ ಜಿಲ್ಲೆಯ ಎಲ್ಲ ಉಪವಿಭಾಗಗಳ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.