ತುಮಕೂರು :
ಸರ್ಕಾರದಿಂದ ಅನುದಾನ ತರಲು ಸಾಕಷ್ಟು ಕಷ್ಟ ಅನುಭವಿಸಿದ್ದೇವೆ, ಅಧಿಕಾರಿಗಳು ಶ್ರದ್ಧೆ ವಹಿಸಿ ಕಾರ್ಯನಿರ್ವಹಿಸಿ ಅನುದಾನ ಸದ್ಬಳಕೆ ಮಾಡಬೇಕೆಂದು ಎಂದು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಸೂಚನೆ ನೀಡಿದರು.
ತಹಶೀಲ್ದಾರ್ ಕಾರ್ಯಾಲಯದಲ್ಲಿ ಬಗರ್ ಹುಕುಂ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಅವರು, ಬಗರ್‍ಹುಕುಂ ಸಮಿತಿ ಕೋರಂ ಕೊರತೆಯಿಂದ ಸಭೆ ರದ್ದುಗೊಂಡ ನಂತರ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ಗ್ರಾಮಾಂತರ ಕ್ಷೇತ್ರದ ಡೀಮ್ಡ್ ಅರಣ್ಯದಲ್ಲಿ ಉಳುಮೆ ಮಾಡುತ್ತಿರುವವರನ್ನು ಒಕ್ಕಲೆಬ್ಬಿಸುವುದು ಬೇಡ, ರೈತರಿಗೆ ಅನಗತ್ಯ ತೊಂದರೆ ನೀಡಬೇಡಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾನೂನು ಸಚಿವರಾದ ಮಾಧುಸ್ವಾಮಿ ಅವರು ಡೀಮ್ಡ್ ಅರಣ್ಯ ಪ್ರದೇಶವವನ್ನು ಕೈಬಿಡಬೇಕೆಂದು ಸುಪ್ರೀಂಕೋರ್ಟ್‍ಗೆ ಅಫಿಡವಿಟ್ ಸಲ್ಲಿಸಿದ್ದಾರೆ. ಇದರಿಂದ ರಾಜ್ಯದಲ್ಲಿ ಭೂ ರಹಿತರಿಗೆ ಭೂಮಿ ಹಂಚಿ ಮಾಡಲು ಸಾಧ್ಯವಿದ್ದು, ಡೀಮ್ಡ್ ಅರಣ್ಯದಿಂದ ಜನರು ಅನುಭವಿಸುತ್ತಿರುವ ಸಮಸ್ಯೆಗೆ ಮುಕ್ತಿ ದೊರೆಯಲಿದೆ, ಪಕ್ಷಾತೀತವಾಗಿ ಅಭಿವೃದ್ಧಿ ಪರ ಚಿಂತಿಸುವ ರಾಜಕಾರಣಿ ಎಂದು ಹೇಳಿದರು.
ಗ್ರಾಮಾಂತರದಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿಲ್ಲವಾದರೂ, ವೃಥಾ ರೈತರಿಗೆ ತೊಂದರೆ ನೀಡಬೇಡಿ, ಉಳುಮೆ ಮಾಡುತ್ತಿರುವ ರೈತರಿಗೆ ತೊಂದರೆ ನೀಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಡೀಮ್ಡ್ ಅರಣ್ಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಆದೇಶ ನೀಡುವವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದರು.
ಬಗರ್‍ಹುಕುಂ ಸಮಿತಿ ಇದುವರೆಗೆ ಮೂರಕ್ಕೂ ಹೆಚ್ಚು ಸಭೆಗಳನ್ನು ನಡೆಸಿ, ಅರ್ಹ ರೈತರಿಗೆ ಸಾಗುವಳಿ ಚೀಟಿ ವಿತರಣೆಗೆ ಕ್ರಮವಹಿಸಲಾಗಿದೆ, ಅರ್ಜಿ ಸಲ್ಲಿಸಿರುವ ರೈತರು ನಿಯಮಗಳ ಪ್ರಕಾರ ಅರ್ಹರಾಗಿದ್ದರೆ ಅವರಿಗೆ ಭೂಮಿ ಮಂಜೂರು ಮಾಡಲು ಸಮಿತಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಗ್ರಾಮಾಂತರ ಕ್ಷೇತ್ರದಲ್ಲಿ ರಸ್ತೆಗಳು ಅಭಿವೃದ್ಧಿಗೊಂಡಿದ್ದು, ಭಾರಮಿತಿಯನ್ನು ನಿಗದಿಪಡಿಸುವಂತೆ ಸೂಚಿಸಿದ ಅವರು, ಓವರ್ ಲೋಡ್ ನಿಂದ ರಸ್ತೆಗಳ ಹಾಳಾಗಲಿದ್ದು, ಭಾರಮಿತಿಯನ್ನು ನಿಗದಿಪಡಿಸುವ ಮೂಲ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಎಂದ ಅವರು, ಗ್ರಾಮಾಂತರದಲ್ಲಿ ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡುವುದು ಬೇಡ, ಪಕ್ಷಾತೀತವಾಗಿ ಸೌಲಭ್ಯಗಳನ್ನು ನೀಡುವಂತೆ ಸೂಚಿಸಿದರು.
ಜಾತ್ರೆ ರದ್ದು: ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಪ್ರಸಿದ್ಧ ಸೀಬಿ ನರಸಿಂಹಸ್ವಾಮಿ ಜಾತ್ರೆ, ಹೆತ್ತೇನಹಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸುವ ಸಾಧ್ಯತೆ ಇದ್ದು, ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ಈಗಾಗಲೇ ರಾಜ್ಯದಲ್ಲಿ ಜಾತ್ರಾ ಮಹೋತ್ಸವಗಳನ್ನು ರದ್ದುಗೊಳಿಸಿದ್ದು, ಗೂಳಹರಿವೆ, ಸೀಬಿ, ಹೆತ್ತೇನಹಳ್ಳಿ ಸೇರಿದಂತೆ ಎಲ್ಲ ಜಾತ್ರಾ ಮಹೋತ್ಸವಗಳನ್ನು ರದ್ದುಗೊಳಿಸಿ, ಪೂಜೆಗೆ ಅವಕಾಶ ನೀಡಬೇಕೆಂದು ಸೂಚಿಸಿದರು.
ಕೋವಿಡ್ ಹೆಚ್ಚಳವಾಗುವ ಭೀತಿ ಇದ್ದು, ಜಾತ್ರಾ ರದ್ದು ಇದ್ದು ನಾಗರೀಕರು ಸರ್ಕಾರ ಸೂಚಿಸಿರುವ ಕೋವಿಡ್ ನಿಯಮಾವಳಿಗಳನ್ನು ಪಾಲಿಸಬೇಕು,ಜಾತ್ರಾ ಸಮಯದಲ್ಲಿ ಗುಂಪುಗೂಡದೇ, ಸಾಮಾಜಿಕ ಅಂತರ ಕಾಯ್ದುಕೊಂಡು ದೇವರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.ನಂತರ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು, ಸಭೆಯಲ್ಲಿ ತಹಶೀಲ್ದಾರ್ ಜಿ.ವಿ.ಮೋಹನ್‍ಕುಮಾರ್, ಕಂದಾಯ ಅಧಿಕಾರಿಗಳಾದ ಜಯಪ್ರಕಾಶ್, ಮಹೇಶ್, ಶಿವಣ್ಣ, ಜೆಡಿಎಸ್ ಮುಖಂಡರಾದ ಹಿರೇಹಳ್ಳಿ ಮಹೇಶ್, ಬೆಳಗುಂಬ ವೆಂಕಟೇಶ್, ಸುರೇಶ್ ಸೇರಿದಂತೆ ಬಗರ್‍ಹುಕುಂ ಸಮಿತಿ ಸದಸ್ಯರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.