ತುಮಕೂರು:
ಜೀವನದಲ್ಲಿ ಬಸವಣ್ಣನವರ ಆದರ್ಶಗಳನ್ನು ರೂಢಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಕರೆ ನೀಡಿದರು.
ನಗರದ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, 12ನೇ ಶತಮಾನದಲ್ಲೇ ಬಸವಣ್ಣನವರು ಸಮಾನತೆಯ ಸಂದೇಶವನ್ನು ಸಾರಿದ್ದರು. ಇಂದು ಅದನ್ನು ಪ್ರತಿಯೊಬ್ಬರು ಚಾಚೂತಪ್ಪದೇ ಪಾಲಿಸಬೇಕು ಎಂದರು.
ವಿದ್ಯಾರ್ಥಿಗಳು ಬಸವಣ್ಣನವರ ಸಂದೇಶ, ವಚನಗಳನ್ನು ತಿಳಿದುಕೊಳ್ಳುವ ಮೂಲಕ ತಮ್ಮ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಬಸವಣ್ಣನವರ ಕಾಯಕವೇ ಕೈಲಾಸ ಮಾತನ್ನು ಚಾಚೂತಪ್ಪದೇ ಯುವಕರು ಪಾಲಿಸಬೇಕು. ಆಗ ಮಾತ್ರ ಬದುಕಿನಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ನಾವೆಲ್ಲರೂ ಬದುಕು ನಡೆಸೋಣ ಎಂದರು.
ಉಪನ್ಯಾಸ ನೀಡಿದ ಡಾ. ನಂಜುಂಡಸ್ವಾಮಿ ಅವರು, ಬಸವ ಜಯಂತಿ ಆಚರಣೆಗೆ ಬಂದ ರೀತಿ, ಬಸವಣ್ಣನವರ ಕಾಲದ ವಚನಗಳ ಸಂಶೋಧನೆ, ಸಂರಕ್ಷಣೆ ಬಗ್ಗೆ ತಿಳಿಸಿದರು.
ಕಾಲೇಜಿನ ನಿರ್ದೇಶಕರಾದ ಡಾ. ಎಂ.ಎನ್. ಚನ್ನಬಸಪ್ಪ, ಮುಖ್ಯ ಕಾರ್ಯನಿರ್ವಣಾಧಿಕಾರಿ ಡಾ. ಶಿವಕುಮಾರಯ್ಯ, ಪ್ರಾಂಶುಪಾಲರು ಮಾತನಾಡಿದರು.
ಇದೇ ಸಂದರ್ಭದಲ್ಲಿ ನಿವೃತ್ತ ನೌಕರರನ್ನು ಸನ್ಮಾನಿಸಿ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.
ಸಮಾರಂಭದಲ್ಲಿ ಎಸ್‍ಐಟಿ ವಿದ್ಯಾರ್ಥಿನಿ ಅನಘಪ್ರಸಾದ್, ಬಸವ ಪುರಾಣವನ್ನು ಹರಿಕಥೆ ಶೈಲಿಯಲ್ಲಿ ಸಾದರಪಡಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ಸಿ. ರೇಣುಕಯ್ಯ, ಎಂ.ಪಿ. ಉಮಾಶಂಕರ್, ಗುರುಚನ್ನಬಸಪ್ಪ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಜಗಜ್ಯೋತಿ ಬಸವೇಶ್ವರ ನಾಟಕ ಪ್ರದರ್ಶನ ನಡೆಯಿತು.