ತುಮಕೂರು:
ಸಮಾಜದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಸ್ತ್ರೀಯ ಏಳಿಗೆಯನ್ನು ನೋಡಬಹುದು. ಹೆಣ್ಣುಮಕ್ಕಳನ್ನು ಕೀಳು ಮನೋಭಾವನೆಯಿಂದ ಕಡೆಗಣಿಸಬೇಡಿ. ಯಾವ ಹೆಣ್ಣುಮಗಳು ತಂದೆ ತಾಯಿಗೆ ಭಾರವಲ್ಲ. ಅವಳು ಗಂಡನ ಮನೆಗೆ ಹೋಗುತ್ತಿದ್ದಾಳೆ ಎಂದರೆ ಅತ್ತೆ ಮಾವ ತುಂಬು ಹೃದಯದಿಂದ ತಮ್ಮ ಮಗಳೇ ಎಂದು ಬರಮಾಡಿಕೊಳ್ಳಬೇಕು. ನ್ಯಾಯಾಲಯಗಳಲ್ಲಿ ಇಂದು ವೈವಾಹಿಕ ಸಮಸ್ಯೆಗಳು ಹೆಚ್ಚುತ್ತಿದ್ದು ಪರಿಹಾರದ ಒಂದು ನಿಟ್ಟಿನಲ್ಲಿ ನಾನು ಇಂದು ಈ ಸಮಾವೇಶಕ್ಕೆ ಆಗಮಿಸಿದ್ದೇನೆ ಎಂದು ತುಮಕೂರಿನ ಕೆಪಿಟಿಸಿಎಲ್ ನೌಕರರ ಸಭಾ ಭವನದಲ್ಲಿ ಅಭ್ಯುದಯ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕುಂಚಿಟಿಗ ವಧು ವರರ ಸಮಾವೇಶದಲ್ಲಿ ಗೌರವಾನ್ವಿತ ಶ್ರೀ ನಟರಾಜು ರಂಗಸ್ವಾಮಿಯವರು ನ್ಯಾಯಾಧೀಶರು ಉಚ್ಚ ನ್ಯಾಯಾಲಯ, ಬೆಂಗಳೂರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ವೈವಾಹಿಕ ಜೀವನವು ಹೊಂದಾಣಿಕೆಯಿಂದ ಕೂಡಿರಬೇಕು ಎಂದು ತಮ್ಮ ಜೀವನದ ಅನುಭವದ ಹಲವು ನಿದರ್ಶನಗಳ ಮೂಲಕ ಮಮತಾ, ಇನ್ಸ್‍ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್ ಅಂಡ್ ಕಮಿಷನರ್ ಆಫ್ ಸ್ಟ್ಯಾಂಪ್ ಇವರು ತಿಳಿಸಿದರು.
ವಿವಾಹವೆನ್ನುವುದು ಪವಿತ್ರ ಬಂಧನದ ಜೊತೆ ಬಾಂಧವ್ಯವನ್ನು ಬೆಸೆಯಬೇಕು ಎಂದು ಶ್ರೀಮತಿ ವಿಜಯಲಕ್ಷ್ಮಿ, ಪೊಲೀಸ್ ಇನ್ಸ್‍ಪೆಕ್ಟರ್, ತುಮಕೂರು ಇವರು ತಿಳಿಸಿದರು. ಈ ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿದ್ದ ಅಭ್ಯುದಯ ಸೇವಾ ಟ್ರಸ್ಟಿನ ಅಧ್ಯಕ್ಷರಾದ ಶ್ರೀಮತಿ ಲಲಿತಾ ಮಲ್ಲಪ್ಪನವರು ಮಾತನಾಡಿ ನಮ್ಮ ಟ್ರಸ್ಟ್ ವತಿಯಿಂದ ರಾಜ್ಯದ ನಾನಾ ಕಡೆ ವಧು-ವರರ ಸಮಾವೇಶಗಳನ್ನು ಆಯೋಜಿಸಿದ್ದೇನೆ ಹಾಗೂ ಪ್ರಸ್ತುತದಲ್ಲಿ ರೈತ ಮಕ್ಕಳಿಗೆ ಹೆಣ್ಣು ಸಿಗದೆ ಇರುವುದು ದುರಾದೃಷ್ಟಕರವಾಗಿದೆ. ಕಾರಣ ಹಳ್ಳಿಗಳಲ್ಲೂ ಹೆಣ್ಣುಮಕ್ಕಳು ಶೈಕ್ಷಣಿಕವಾಗಿ ಮುಂದುವರಿದಿದ್ದು ರೈತ ಗಂಡುಮಕ್ಕಳನ್ನು ಕಡೆಗಣಿಸುವಂತಾಗಿದೆ. ಸರ್ಕಾರ ಮಧ್ಯ ಪ್ರವೇಶಿಸಿ ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕೆಂದು ತಿಳಿಸಿದರು. ಈ ಕಾರ್ಯಕ್ರಮವನ್ನು ನೇತ್ರಾ ಗಿರೀಶ್ ನಿರೂಪಿಸಿದರು. ಕಾತ್ಯಾಯಿನಿ ಪ್ರಭಾಕರ್ ಪ್ರಾರ್ಥಿಸಿದರು. ಶಾರದ ರಂಗರಾಜ್ ಎಲ್ಲರನ್ನೂ ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ಟ್ರಸ್ಟಿನ ಉಪಾಧ್ಯಕ್ಷರಾದ ರಮ್ಯ, ರಾಘವೇಂದ್ರ, ಧನಂಜಯ್, ಸಾಗರ್, ಹನುಮಂತಯ್ಯ ಹಾಗೂ ಸುಮಾರು 800 ಜನ ತಂದೆ ತಾಯಂದಿರುಭಾಗವಹಿಸಿದ್ದರು.