ತುಮಕೂರು
ವರ್ಷದ 12 ಮಾಸಗಳಲ್ಲಿ ಧನುರ್ಮಾಸ ಅತ್ಯಂತ ಶ್ರೇಷ್ಠ ಮಾಸವಾಗಿದೆ, ನವಗ್ರಹಗಳಿಗೆ ಅಧಿಪತಿ ಸೂರ್ಯದೇವ, ಅಂತಹ ಸೂರ್ಯ ಗ್ರಹ ಧನಸ್ಸುರಾಶಿಗೆ ಬಂದಾಗ ಧನುರ್ಮಾಸ ಪ್ರಾರಂಭವಾಗುತ್ತದೆ, ಧನಸ್ಸು ರಾಶಿಗೆ ಗುರು ಅಧಿಪತಿ,ಇಂತಹ ಮಾಸದಲ್ಲಿ ಗುರುವಿನಿಂದ ಉಪದೇಶವನ್ನು ಪಡೆಯುವ ನೀವೆಲ್ಲರೂ ಧನ್ಯರು,ವೀರಶೈವರು ಇಷ್ಟಲಿಂಗ ಬಿಟ್ಟು ಬೇರೊಂದು ದೈವವಿಲ್ಲ ಎಂದು ತಿಳಿಯಬೇಕು,ಶಿವಯೋಗದ ಮುಖಾಂತರ ದೈವತ್ವವನ್ನು ಪಡೆಯಬೇಕು,ಶಿವ ವೀರಶೈವರಿಗೆ ಅಂಗೈಯಲ್ಲಿ ಇಷ್ಟಲಿಂಗವನ್ನು ದಯಪಾಲಿಸಿದ್ದಾನೆ ಇದೊಂದು
ವೀರಶೈವರಿಗೆ ವರ,ಇಷ್ಟಲಿಂಗವನ್ನು ಪೂಜಿಸುವ ಮೂಲಕ ದೈವತ್ವವನ್ನು ಕಾಣಬಹುದು,ಇಷ್ಟಲಿಂಗ ಪೂಜೆಯೇ ಶ್ರೇಷ್ಠ,ಶಿವಪೂಜೆಯೇ ಕಡ್ಡಾಯವ್ರತ ಎಂದು ವೀರಶೈವರು ತಿಳಿಯಬೇಕು ಎಂದು ಉಜ್ಜಯಿನಿ 1008 ಜಗದ್ಗುರು ಶ್ರೀ ಸಿದ್ದಲಿಂಗರಾಜದೇಶಿಕೇಂದ್ರ ಶಿವಾಚಾರ್ಯ ಮಹಾ ಭಗವತ್ಪಾದರು ಹೇಳಿದರು.
ಅವರು ತುಮಕೂರು ನಗರದ ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿರುವ ವಿಶಾಲಾಕ್ಷಮ್ಮ ಸದಾಶಿವಯ್ಯ ಸಭಾಭವನದಲ್ಲಿ ನಡೆಯುತ್ತಿರುವ ಧನುರ್ಮಾಸದ ಇಷ್ಟಲಿಂಗ ಮಹಾಪೂಜೆ ಮತ್ತು ಧರ್ಮ ಪರಂಪರೆ ರಕ್ಷಣೆಯ ಸಮಾರಂಭವನ್ನು ಉದ್ಘಾಟಿಸಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಉಪದೇಶಾಮೃತ ನೀಡಿದ ಯೆಡೆಯೂರು ಶ್ರೀ ರೇಣುಕ ಶಿವಾಚಾರ್ಯಸ್ವಾಮೀಜಿಗಳು ಈ ಶರೀರ ಪಂಚಭೂತಗಳಿಂದ ಬಂದಿದೆ ಹಾಗೆಯೇ ಪಂಚಪೀಠಾಚಾರ್ಯರು ಒಂದೊಂದು ಶಕ್ತಿಯನ್ನು ಹೊಂದಿ ನಮಗೆ ಸಂಸ್ಕಾರ ನೀಡಿದ್ದಾರೆ,ಭೂಮಿಗೆ ರಂಭಾಪುರಿ ಪೀಠ,ನೀರಿಗೆ – ಉಜ್ಜಯಿನಿ ಪೀಠ,ಶಾಖಕ್ಕೆ ಕೇದಾರ ಪೀಠ,ಗಾಳಿಗೆ ಶ್ರೀಶೈಲ ಪೀಠ,ಆಕಾಶಕ್ಕೆ ಕಾಶಿಪೀಠ ಹೀಗೆ ಪಂಚಪೀಠಗಳು
ಪಂಚಭೂತಗಳ ನೇತೃತ್ವವನ್ನು ವಹಿಸಿದ್ದಾರೆಂದು ತಿಳಿಸುತ್ತಾ ಹಲವು ವಚನಗಳ ಮೂಲಕ ಸಂಸ್ಕಾರದ ಬಗ್ಗೆ ತಿಳಿಸಿದರು,ಹುಟ್ಟಿದ ಪ್ರತಿ ಮನುಷ್ಯ ಲಿಂಗಪೂಜೆಯನ್ನು ಮಾಡಿ ಎಂದು ಹೇಳಿದರು.
ಉಪದೇಶಾಮೃತ ನೀಡಿದ ಶಿವಗಂಗೆಯ ಮೇಲಣ ಗವಿಮಠದ ಶ್ರೀಮಲಯ ಶಾಂತಮುನಿ ಶಿವಾಚಾರ್ಯಸ್ವಾಮೀಜಿಗಳು ದೇಹದಲ್ಲಿ ಇಷ್ಟಲಿಂಗ ಧರಿಸಿದರೆ ದೇಹಶುದ್ಧಿಯಾಗುತ್ತದೆ, ಲಿಂಗಪೂಜೆ ಮಾಡುವುದರಿಂದ ಮನಶುಃದ್ಧಿಯಾಗಿ ಉತ್ತಮ ದಾರಿ ದೊರಕುತ್ತದೆ,ಶಿವಪೂಜೆ,ಶಿವಧ್ಯಾನದಿಂದ ಮನಷ್ಯನಿಗೆ ಎಲ್ಲವೂ ಒಳ್ಳೆಯದಾಗುತ್ತದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಟಿ.ಬಿ.ಶೇಖರ್,ಡಾ||ಎಂ.ಆರ್.ಹುಲಿನಾಯ್ಕರ್,ಜಯಶಂಕರ್ ಆರಾಧ್ಯ,ಶಿವಾನಂದ್,ಮುರಳಿಕೃಷ್ಣಪ್ಪ ಉಪಸ್ಥಿತರಿದ್ದರು.
ಉಜ್ಜಯಿನಿ ಮಹಾಪೀಠದ ಗುರುಕುಲ ಸಾಧಕರು ವೇದಘೋಷ ಮಾಡಿದರು,ಟಿ.ಆರ್.ಸದಾಶಿವಯ್ಯ ಸ್ವಾಗತಿಸಿದರು,ಶ್ರೀಮತಿ ನಾಗವೀಣರವರು ನಿರೂಪಿಸಿದರು.