ತುಮಕೂರು
ಇತಿಹಾಸ ಪ್ರಸಿದ್ದ ಶ್ರೀಸಿದ್ದಗಂಗಾ ಮಠದ ಶ್ರೀಚನ್ನಬಸವೇಶ್ವರ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಫೆ.08ರಿಂದ 22ರವರೆಗೆ ನಡೆಯಲಿದೆ ಎಂದು ವಸ್ತುಪ್ರದರ್ಶನ ಸಮಿತಿಯ ಕಾರ್ಯದರ್ಶಿ ಬಿ.ಗಂಗಾಧರಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಕೃಷಿ, ಅರಣ್ಯ, ತೋಟಗಾರಿಕೆ, ರೇಷ್ಮೆ ಸೇರಿದಂತೆ ಸರಕಾರದ 16, ಖಾಸಗಿಯ 5 ಮಳಿಗೆಗಳು ಸೇರಿ ಒಟ್ಟು 197ಮಳಿಗೆಗಳನ್ನು ತೆರೆಯಲಾಗಿದ್ದು,15 ದಿನಗಳ ಕಾಲ ನಡೆಯುವ ಈ ವಸ್ತುಪ್ರದರ್ಶನಕ್ಕೆ ಒಂದು ಲಕ್ಷಕ್ಕೂ ಅಧಿಕ ಜನರು ಭೇಟಿ ನೀಡುವ ನಿರೀಕ್ಷೆ ಇದೆ ಎಂದರು.
ಕಳೆದ 59 ವರ್ಷಗಳಿಂದ ಈ ಭಾಗದ ಕೃಷಿಕರು, ಕೈಗಾರಿಕೋದ್ಯಮಿಗಳು ಹಾಗೂ ಜನಸಾಮಾನ್ಯರಿಗೆ ಆಯಾಯ ಕ್ಷೇತ್ರದ ಹೊಸ ಅವಿಷ್ಕಾರಗಳ ತಿಳುವಳಿಕೆ ನೀಡುವ ಉದ್ದೇಶದಿಂದ ನಡೆದಾಡುವ ದೇವರು ಎಂದೇ ಪ್ರಸಿದ್ದರಾಗಿದ್ದ ಡಾ.ಶ್ರೀಶಿವಕುಮಾರ ಸ್ವಾಮೀಜೀಗಳು ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನವನ್ನು 1964ರಲ್ಲಿ ಆರಂಭಿಸಿದರು.ಇಂದು ಇಷ್ಟು ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವ ಏಕೈಕ ವಸ್ತು ಪ್ರದರ್ಶನ ಇದಾಗಿದೆ ಎಂದು ಗಂಗಾಧರಯ್ಯ ತಿಳಿಸಿದರು.
ಜಾನುವಾರುಗಳ ಜಾತ್ರೆ ಇಲ್ಲ:ಸಿದ್ದಗಂಗಾ ಜಾತ್ರೆಯ ಸಂಬಂಧ ನಡೆಯುವ ಈ ವಸ್ತು ಪ್ರದರ್ಶನದ ಸಂದರ್ಭದಲ್ಲಿ ಜಾನುವಾರು ಜಾತ್ರೆ ನಡೆಯುವುದು ಸಂಪ್ರದಾಯ.ಆದರೆ ಈ ಬಾರಿ ಸರಕಾರ ಅಂದರೆ ಪಶುಪಾಲನೆ ಮತ್ತು ಪಶುಸಂಗೋಪನಾ ಇಲಾಖೆ, ರಾಜ್ಯದಲ್ಲಿ ಜಾನುವಾರುಗಳಿಗೆ ಚರ್ಮದ ಗಂಟು ರೋಗ ಕಂಡು ಬಂದಿರುವ ಹಿನ್ನೆಲೆಯಲ್ಲಿ ಜಾನುವಾರು ಜಾತ್ರೆ,ಸಂತೆಗಳನ್ನು ನಿಷೇಧಿಸಿರುವ ಹಿನ್ನೇಲೆಯಲ್ಲಿ ಈ ಬಾರಿಯ ಜಾತ್ರೆಯ ವೇಳೆ ಜಾನುವಾರುಗಳ ಪರಿಷೇ ನಡೆಯುವುದಿಲ್ಲ.
ಸಿದ್ದಗಂಗಾ ವಸ್ತುಪ್ರದರ್ಶನ ಸಮಿತಿಯ ಸಹಕಾರ್ಯದರ್ಶಿ ಶಿವಕುಮಾರ್ ಮಾತನಾಡಿ,ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನಕ್ಕೆ ಬರುವ ಜನರಿಗಾಗಿ ಎಲ್ಲಾ ಸಿದ್ದತೆಗಳನ್ನು ಸಮಿತಿಯಿಂದ ಮಾಡಿಕೊಳ್ಳಲಾಗಿದೆ.ಕೃಷಿ, ತೋಟಗಾರಿಕೆ, ಆರಣ್ಯ ಮತ್ತು ರೇಷ್ಮೆ ಇಲಾಖೆಯವರು ತಮ್ಮ ತಾಕುಗಳಲ್ಲಿ ಅಗತ್ಯವಾದ ಗಿಡಗಳನ್ನು ಬೆಳೆಸಿ,ವಸ್ತುಪ್ರದರ್ಶನಕ್ಕೆ ಬಂದವರಿಗೆ ತಮ್ಮ ಇಲಾಖೆಯ ಹೊಸ ಅವಿಷ್ಕಾರಗಳ ಕುರಿತು ವಿವರಿಸಲು ಸಿದ್ದತೆ ನಡೆಸಿದ್ದಾರೆ.ಜನರಿಗೆ ಕುಡಿಯುವ ನೀರು,ದಾಸೋಹ ನೀಡಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದರು.
ವಸ್ತು ಪ್ರದರ್ಶನ ಸಮಿತಿ ಸಂಚಾಲಕ ಕೆಂ.ಬಾ.ರೇಣುಕಯ್ಯ ಮಾತನಾಡಿ,ವಸ್ತು ಪ್ರದರ್ಶನದ ಸಂದರ್ಭದಲ್ಲಿ ಜನರ ಮನರಂಜನೆ ಗಾಗಿ ನಾಟಕ,ಸುಗಮಸಂಗೀತ ಇನ್ನಿತರ ಸಾಂಸ್ಕøತಿಕ ಕಾರ್ಯಕ್ರಮವನ್ನು ಏರ್ಪಡಿಸುವುದು ಆನಾದಿ ಕಾಲದಿಂದಲೂ ನಡೆದು ಬಂದಿದೆ.ಅದೇ ರೀತಿ ಈ ಬಾರಿಯೂ ಸ್ಥಳೀಯ ಕಲಾವಿದರು ಸೇರಿದಂತೆ ರಾಜ್ಯದ ಹೆಸರಾಂತ ನಾಟಕ ಕಂಪನಿಗಳಿಂದ ನಾಟಕ, ಸುಗಮ ಸಂಗೀತ, ನೃತ್ಯ ಮತ್ತಿತರರ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಪ್ರತಿದಿನ ಸಂಜೆ 6:30 ರಿಂದ ರಾತ್ರಿ 11 ಗಂಟೆಯವರೆಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.ಸುತ್ತಮುತ್ತಲ ನಾಗರಿಕರು ಇದರ ಲಾಭ ಪಡೆದುಕೊಳ್ಳ ಬೇಕೆಂದು ಮನವಿ ಮಾಡಿದರು.