ತುಮಕೂರು
ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿಯಾದ ಮಾಜಿ ಶಾಸಕ ರಫಿಕ್ ಅಹ್ಮದ್‍ಗೆ ಸೋಲಿನ ಭೀತಿ ಮತ್ತೆ ಕಾಡ್ತಾ ಇದ್ಯಾ? ಹಣ ಇಲ್ಲ ಎಂಬ ನೆಪವೊಡ್ಡಿ ಕಣದಿಂದ ಹಿಂದೆ ಸರಿಯುತ್ತಿದ್ದಾರೆ ಎಂಬ ಗುಮಾನಿ ಹುಟ್ಟಿಕೊಂಡಿದೆ.
ಕಾಂಗ್ರೆಸ್‍ನ ಇನ್ನೊಬ್ಬ ಟಿಕೆಟ್ ಆಕಾಂಕ್ಷಿ ಡಾ. ಬೊಮ್ಮನಹಳ್ಳಿ ಬಾಬು @ ಅಟ್ಟಿಕಾ ಬಾಬು ಮಾತು ಈ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಅಟ್ಟಿಕಾ ಗೋಲ್ಡ್ ಕಂಪನಿಯ ಮಾಲೀಕ ಅಟ್ಟಿಕಾ ಬಾಬು ಕೆಲದಿನಗಳ ಹಿಂದೆ ಮಸೀದಿಗಳಿಗೆ ಭೇಟಿ ಕೊಟ್ಟು ಆಡಿದ ಮಾತುಗಳ ರಫಿಕ್ ಅಹ್ಮದ್ ಸ್ಪರ್ಧೆ ಮಾಡಲ್ಲ ಎನ್ನುವುದಕ್ಕೆ ಇನ್ನಷ್ಟು ಪುಷ್ಟಿ ನೀಡಿದೆ. ರಫಿಕ್ ಅಹ್ಮದ್ ನನಗೆ ಸಹಾಯ ಮಾಡುತ್ತಾರೆ. ಅವರ ಬಳಿ ಹಣ ಇಲ್ಲ.
ಹಾಗಾಗಿ ಅವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಅಟ್ಟಿಕಾ ಬಾಬು ಮಸೀದಿಯಲ್ಲಿ ಹೇಳಿದ್ದಾರೆ. ಅಟ್ಟಿಕಾ ಬಾಬು ಕೂಡ ಮುಸ್ಲಿಂ ಸಮುದಾಯದವನಾಗಿದ್ದು, ನನ್ನ ಹೆಸರು ಅಯೂಬ್ ನನ್ನ ತಂದೆ ಪಾಷ ಸಾಬ್ ಎಂದು ಹೇಳಿಕೊಂಡಿದ್ದಾರೆ. ಈ ವೀಡಿಯೋ ಸಾಕಷ್ಟು ವೈರಲ್ ಆಗಿದ್ದು ಸಂಚಲನ ಸೃಷ್ಟಿಸಿದೆ.
ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್
ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಾಕಾಂಕ್ಷಿಯಾಗಿ ಉದ್ಯಮಿ ಅಟ್ಟಿಕಾ ಬಾಬು ಸಹ ಅರ್ಜಿ ಸಲ್ಲಿಸಿದ್ದು, ನಾನೂ ಅಭ್ಯರ್ಥಿ ಎಂದು ಹೇಳಿಕೊಳ್ಳವುದರಲ್ಲಿ ತಪ್ಪೇನೂ ಇಲ್ಲ ಎಂದು ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪರಮೇಶ್ವರ್, ಅಟ್ಟಿಕಾ ಬಾಬು ನಮ್ಮ ಮನೆಗೆ ಬಂದಿದ್ದರು. ನನಗೆ ಟಿಕೆಟ್ ನೀಡುವಂತೆ ಕೇಳಿದರು. ಪಕ್ಷದಲ್ಲಿ ಕೆಲಸ ಮಾಡಿ ಎಂದು ಅಟ್ಟಿಕಾ ಬಾಬು ತಿಳಿಸಿದೆ. ಅಷ್ಟೇ ಅಲ್ಲ ಅಭ್ಯರ್ಥಿಯಾಗಿ ಹೈಕಮಾಂಡ್ ಒಪ್ಪಿದರೆ ನಮ್ಮದೇನೂ ಅಭ್ಯಂತರವಿಲ್ಲ ಎಂದು ಹೇಳಿಕಳಿಸಿದ್ದೇನೆ ಎಂದು ತಿಳಿಸಿದರು.
ತುಮಕೂರು ನಗರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿಯಾಗಿ ಅಟ್ಟಿಕಾ ಬಾಬು ಅರ್ಜಿ ಸಲ್ಲಿಸಿದ್ದಾರೆ ಎಂದು ಸ್ಪಷ್ಟಪಡಿಸಿದ ಪರಮೇಶ್ವರ್ ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಗೊಂದಲಗಳಿಗೆ ತೆರೆ ಎಳೆದರು. ಅಟ್ಟಿಕಾಬಾಬು ಕೂಡ ಅಭ್ಯರ್ಥಿಯಾಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿರುವುದನ್ನು ಬಹಿರಂಗಪಡಿಸಿದರು.
ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆ ಸಿದ್ದವಾಗುತ್ತಿದೆ. ಪ್ರತಿಯೊಂದು ಜಿಲ್ಲೆಗೂ ಭೇಟಿ ನೀಡಿ ಆಯಾ ಜಿಲ್ಲೆಯ ಪ್ರಮುಖ ಹತ್ತು ಅಂಶಗಳನ್ನು ತೆಗೆದುಕೊಂಡು ಪ್ರಣಾಳಿಕೆಯಲ್ಲಿ ಪ್ರಕಟಿಸುತ್ತೇವೆ ಎಂದು ಹೇಳಿದರು.