ತುಮಕೂರು
ಮಹಿಳೆಯರು ಮತ್ತು ಮಕ್ಕಳು ಮೋಸದ ಬಲೆಗೆ ಸುಲಭವಾಗಿ ಬೀಳುವ ಸಾಧ್ಯತೆಯಿರುವುದರಿಂದ ಅವರನ್ನು ರಕ್ಷಿಸುವುದು ಅವಶ್ಯಕವಾಗಿರುತ್ತದೆ. ಮಹಿಳೆಯರು ಮತ್ತು ಮಕ್ಕಳನ್ನು ಅನೈತಿಕ ಸಾಗಾಣಿಕೆಯಿಂದ ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನೂರುನ್ನೀಸ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ, ತುಮಕೂರು ಗ್ರಾಮಾಂತರ ಇವರ ಸಹಯೋಗದಲ್ಲಿ ಆಯೋಜಿಸಿದ್ದ “ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವಿಕೆ” ಕುರಿತಂತೆ ಪುನಶ್ಚೇತನ ತರಬೇತ್ನಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ, ಮಹಿಳೆಯರು ಮತ್ತು ಮಕ್ಕಳು ಸಾಗಾಣಿಕೆಯಾಗುತ್ತಿರುವುದು ಶೋಚನೀಯ ಸಂಗತಿ. ಮಹಿಳೆಯರು ತಮಗೆ ಅರಿವಿಲ್ಲದೆ ಇಂತಹ ಸಮಸ್ಯೆಗಳಿಗೆ ಸಿಲುಕುತ್ತಾರೆ ಹಾಗೂ ಬಡ ಕುಂಟುಂಬದ ಹೆಣ್ಣು ಮಕ್ಕಳು ಆಮಿಷಗಳಿಗೆ ಒಳಗಾಗುತ್ತಾರೆ. ಉದ್ಯೋಗದ ಭರವಸೆ ನೀಡಿ ಮಾರಾಟ ಮಾಡಿ ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಈ ಪಿಡುಗು ಮಕ್ಕಳು, ಅಪ್ರಾಪ್ತ ವಯಸ್ಕರು, ಕಾರ್ಮಿಕ ವರ್ಗ, ಮಹಿಳೆಯರು, ಯುವ ಜನರನ್ನು ಸಹ ಸಮಸ್ಯೆಗೆ ತಳ್ಳುತ್ತಿದೆ ಎಂದರು.
ಮನೆಕೆಲಸ, ಸುಳ್ಳು ಮದುವೆ, ಗುಪ್ತ ಉದ್ಯೋಗಗಳು ಹಾಗೂ ಸುಳ್ಳು ದತ್ತುಗಳಂತಹ ಕಾನೂನುಬಾಹಿರ ಚಟುವಟಿಕೆಗಳಿಗಾಗಿ ಲೈಂಗಿಕವಾಗಿ ಹಾಗೂ ಆರ್ಥಿಕವಾಗಿ ಅಸಹನೀಯವಾದ ಹಾಗೂ ಶೋಚನೀಯ ಪರಿಸ್ಥಿತಿಗೆ ಮಹಿಳೆಯರು ಮತ್ತು ಮಕ್ಕಳನ್ನು ಬಲಾತ್ಕಾರದಿಂದ ತಳ್ಳಲಾಗುತ್ತಿದೆ. ಮಕ್ಕಳನ್ನು ದುಡಿಮೆಗೆ ಬಳಸಿಕೊಳ್ಳುವ ಪ್ರಕರಣಗಳು ಹಾಗೂ ಕೆಲವೊಂದು ಕಡೆ ಜೀತ ಪದ್ಧತಿ ಇನ್ನು ಜೀವಂತವಾಗಿದ್ದು, ಈ ಬಗ್ಗೆ ಗಮನಹರಿಸಬೇಕಾಗಿದೆ ಎಂದು ತಿಳಿಸಿದರು.
ಮಹಿಳೆಯರ ಮತ್ತು ಮಕ್ಕಳ ಸಾಗಾಟ ನಿಲ್ಲಿಸುವುದು ಅಂಗನವಾಡಿ ಕಾರ್ಯಕರ್ತೆ, ಆಶಾ ಕಾರ್ಯಕರ್ತೆ, ಶಿಕ್ಷಕರು, ಆರೋಗ್ಯ ಅಧಿಕಾರಿಗಳು, ಪೋಲಿಸ್ ಅಧಿಕಾರಿಗಳು, ಗ್ರಾಮ ಪಂಚಾಯಿತಿ, ಸಾರ್ವಜನಿಕರು ಹಾಗೂ ನಾವೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು. ನಂತರ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಎಂ.ಎಸ್.ಶ್ರೀಧರ್ ಅವರು, ಸಾಗಾಣಿಕೆಯು ಒಂದು ವ್ಯವಸ್ಥಿತ ಅಪರಾಧವಾಗಿದೆ. ಸಾಗಾಣಿಕೆ ಮಾಡುವ ಉದ್ದೇಶವೇನೆಂದರೆ ಅಂಗಾಂಗಗಳ ಮಾರಾಟ, ಮಕ್ಕಳನ್ನು ದತ್ತು ಪಡೆಯುವ ನೆಪದಲ್ಲಿ ಮಕ್ಕಳ ಮಾರಾಟ, ಬಿಕ್ಷಾಟನೆಗಾಗಿ, ಇನ್ನು ಮುಂತಾದ ಕಾರಣಗಳಿಗೆ ಮಹಿಳೆ ಮತ್ತು ಮಕ್ಕಳ ಸಾಗಾಣಿಕೆ ನಡೆಯುತ್ತಿದೆ. ಸಾಗಾಣಿಕೆಗೆ ಸುಲಭವಾಗಿ ಪ್ರಾಯ ಪೂರ್ವ ಬಾಲಕಿಯರು, ಅವಿವಾಹಿತ ಮಹಿಳೆಯರು, ವಿಧವೆಯರು, ದುಡಿಯುವ ಮಕ್ಕಳು, ಬೀದಿ ಮಕ್ಕಳು, ಕಾಣೆಯಾದ ಮಕ್ಕಳು, ನಿರ್ಲಕ್ಷಿತ ಮಕ್ಕಳು, ದುರ್ಬಲ ವರ್ಗದವರಾಗಿದ್ದಾರೆ ಎಂದು ತಿಳಿಸಿದರು. ಸಾಗಾಣಿಕೆಯನ್ನು ತಡೆಗಟ್ಟಲು ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ತೀವ್ರ ನಿಗಾವಹಿಸುವುದು, ಗ್ರಾಮ ಪಂಚಾಯತಿಗಳು ವಲಸಿಗರ ಬಗ್ಗೆ ಅಂಕಿ-ಅಂಶಗಳನ್ನು ನಿರ್ವಹಿಸುವುದು, ಗ್ರಾಮ ಪಂಚಾಯತಿಗಳಲ್ಲಿ ಕಾವಲು ಸಮಿತಿಗಳಿದ್ದು, ಈ ಸಮಿತಿಗಳು ಹೆಚ್ಚು ಕ್ರಿಯಾಶೀಲವಾಗಬೇಕಿದೆ. ಯಾವುದೇ ಮಹಿಳೆ ಅಥವಾ ಮಕ್ಕಳು ಕಾಣೆಯಾಗಿದ್ದಲ್ಲಿ ತಕ್ಷಣ ಪೋಲೀಸ್ ಠಾಣೆಗೆ ದೂರು ನೀಡುವುದು. ಹದಿಹರೆಯದ ಹೆಣ್ಣು ಮಕ್ಕಳಿಗೆ ಆಸೆ-ಆಮಿಷಗಳಿಗೆ ತುತ್ತಾಗದಂತೆ ಅರಿವು ಮೂಡಿಸುವುದು ಹಾಗೂ ವಿವಿಧ ಆಮಿಷಗಳಿಗೆ ಒಳಗಾಗಿ ಮೋಸದ ಬಲೆಗೆ ತುತ್ತಾಗಿ ಶೋಷಿತರಾಗುವುದನ್ನು ಸಮುದಾಯದ ಪ್ರತಿಯೊಬ್ಬರು ಅರಿತು ಜಾಗೃತರಾದಲ್ಲಿ ಸಾಗಾಣಿಕೆಯನ್ನು ತಡೆಯಬಹುದು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶ್ರೀ.ಸಾ.ಚಿ.ರಾಜಕುಮಾರ್, ವಕೀಲರು, ಶ್ರೀಮತಿ ಕವಿತ, ವಕೀಲರು, ತುಮಕೂರು ಇವರು ಮಾನವ ಸಾಗಾಣಿಕೆ ತಡೆ ಕಾಯ್ದೆ ಮತ್ತು ಬಾಲ್ಯ ವಿವಾಹ ನಿಷೇದ ಕಾಯ್ದೆ ಕುರಿತು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಓಂಕಾರಪ್ಪ, ತುಮಕೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ದಿನೇಶ್, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಮಲಮ್ಮ ಕೆ. ಸೇರಿದಂತೆ ವಿವಿಧ ಅಧಿಕಾರಿ/ಸಿಬ್ಬಂದಿ ವರ್ಗದವರು ಹಾಜರಿದ್ದರು.