ತುಮಕೂರು
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ದಿನಾಂಕ ಘೋಷಣೆಗೆ ಮುನ್ನವೇ ರಂಗೇರಿದ್ದು, ಭಾರತೀಯ ಜನತಾ ಪಾರ್ಟಿ ಮಾ. 21 ರಂದು 3 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ವಿಜಯ ಸಂಕಲ್ಪ ಯಾತ್ರೆ ಹಮ್ಮಿಕೊಂಡಿದೆ.
ನಾಳೆ ಬೆಳಿಗ್ಗೆಯಿಂದ ಸಂಜೆವರೆಗೂ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಯಲಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಚ್.ಎಸ್. ರವಿಶಂಕರ್ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು.ಇಂದು ಬೆಳಿಗ್ಗೆ 11 ಗಂಟೆಗೆ ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ವಿಜಯ ಸಂಕಲ್ಪ ಯಾತ್ರೆ ಸಂಚರಿಸಲಿದೆ. ನಂತರ ರ್ಯಾಲಿ ಮತ್ತು ಸಾರ್ವಜನಿಕ ಸಭೆ ಸಹ ನಡೆಯಲಿದೆ. ಈ ಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಆರ್. ಅಶೋಕ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸೇರಿದಂತೆ ಮತ್ತಿತರ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದರು.
ತುರುವೇಕೆರೆ ಕ್ಷೇತ್ರದಿಂದ ಮಧ್ಯಾಹ್ನ 1 ಗಂಟೆಗೆ ವಿಜಯ ಸಂಕಲ್ಪ ಯಾತ್ರೆಯು ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಬೆಳ್ಳಾವಿಗೆ ಆಗಮಿಸಿ ಯಡಿಯೂರಪ್ಪನವರ ನೇತೃತ್ವದಲ್ಲಿ ಈ ಯಾತ್ರೆ ನಡೆಯಲಿದೆ. ನಂತರ ಬೃಹತ್ ಸಾರ್ವಜನಿಕ ಸಮಾವೇಶ ಜರುಗಲಿದೆ ಎಂದು ಅವರು ಹೇಳಿದರು.
ತುರುವೇಕೆರೆ ಮತ್ತು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಗಳ ಬಳಿಕ ವಿಜಯ ಸಂಕಲ್ಪ ಯಾತೆಯು ಸಂಜೆ ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಲಿದ್ದು, ರೋಡ್ ಶೋ ನಡೆಯಲಿದೆ ಎಂದರು.
ಸಂಜೆ ನಗರಕ್ಕೆ ಯಾತ್ರೆ ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಮಾತನಾಡಿ, ನಾಳೆ ಸಂಜೆ 5 ಗಂಟೆಗೆ ನಗರದ ಬಿಜಿಎಸ್ ವೃತ್ತದಿಂದ ವಿಜಯ ಸಂಕಲ್ಪ ಯಾತ್ರೆ ಆರಂಭವಾಗಲಿದ್ದು, ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಈ ಯಾತ್ರೆಯು ಎಂ.ಜಿ. ರಸ್ತೆ, ಜನರಲ್ ಕಾರ್ಯಪ್ಪ ರಸ್ತೆ, ಭದ್ರಮ್ಮ ವೃತ್ತ, ಎಸ್‍ಐಟಿ ಮುಖ್ಯ ದ್ವಾರದಲ್ಲಿ ಸಾಗಿ ಕೊನೆಗಳ್ಳಲಿದೆ. ಈ ಯಾತ್ರೆಯಲ್ಲಿ ವಿವಿಧ ಜಾನಪದ ಕಲಾ ತಂಡಗಳು ಸಹ ಪಾಲ್ಗೊಳ್ಳಲಿವೆ ಎಂದರು.
ಯಾತ್ರೆಯ ಬಳಿಕ ನಗರದ ಸೂಕ್ತ ಸ್ಥಳದಳಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ವೈ.ಎಚ್. ಹುಚ್ಚಯ್ಯ, ಟಿ.ಆರ್. ಸದಾಶಿವಯ್ಯ, ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.