ತುಮಕೂರು
ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅನ್ನ, ಅಕ್ಷರ, ಆಶ್ರಯ, ಆರೋಗ್ಯ ಮತ್ತು ಅಭಿವೃದ್ದಿ ಎಂಬ ಐದು ಅಂಶಗಳನ್ನು ಮುಂದಿಟ್ಟುಕೊಂಡು,ಕಾಂಗ್ರೆಸೇ ಪರಿಹಾರ ಎಂಬ ಘೋಷ ವಾಕ್ಯದೊಂದಿಗೆ ಚುನಾವಣೆ ಎದುರಿಸಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರಾಯಸಂದ್ರ ರವಿಕುಮಾರ್ ತಿಳಿಸಿದ್ದಾರೆ.
ಇಂದು ಖಾಸಗಿ ಹೊಟೇಲ್ನಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಪದಾಧಿಕಾರಿಗಳು, ತಾಲೂಕು ಸಂಯೋಜಕರು ಗಳ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರ ಮೇ.10 ರಂದು ನಡೆಯುವ ಚುನಾವಣೆಯಲ್ಲಿ ಮೇಲಿನ ಪಂಚಮಂತ್ರಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಚುನಾವಣೆಯಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳಲಿದ್ದೇವೆ ಎಂದರು.
ರಾಜ್ಯದಲ್ಲಿ ಅಡಳಿತದಲ್ಲಿರುವ ಬಿಜೆಪಿಯ ಜನವಿರೋಧಿ ನೀತಿಗಳಿಂದಾಗಿ ದಿನ ನಿತ್ಯದ ವಸ್ತುಗಳ ಬೆಲೆಗಳು ಹೆಚ್ಚಾಗಿ ಜನಸಾಮಾನ್ಯರು ದಿನದೂಡುವುದೇ ಕಷ್ಟವಾಗಿದೆ.ಹಾಗಾಗಿ ಕಾಂಗ್ರೆಸ್ ಪ್ರತಿ ಮನೆಯ ಗೃಹಿಣಿಗೆ ಮಾಸಿಕ 2000 ರೂ ನೀಡುವ ಗೃಹಲಕ್ಷ್ಮಿ ಯೋಜನೆ, ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತದ ಗೃಹಜೋತಿ, ಪ್ರತಿ ಪಡಿತರದಾರರಿನಿಗೆ ತಲಾ 10 ಕೆ.ಜಿ.ಅನ್ನಭಾಗ್ಯ, ನಿರುದ್ಯೋಗಿ ಯುವಕರಿಗಾಗಿ ಪದವಿಧರರಿಗೆ ಮಾಸಿಕ 3000 ರೂ, ಡಿಪ್ಲಮೋದವರಿಗೆ ತಲಾ 1500 ರೂ ನೀಡುವ ಯೋಜನೆಗಳನ್ನು ಹಾಕಿಕೊಂಡಿದೆ. ಈ ಎಲ್ಲಾ ಯೋಜನೆಗಳನ್ನು ಸರಕಾರ ಅಧಿಕಾರಕ್ಕೆ ಬಂದ ಒಂದು ತಿಂಗಳ ಒಳಗೆ ಜಾರಿಗೆ ಬರಲಿವೆ.ಇದನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಕೆ.ಪಿ.ಸಿ.ಸಿ.ಪ್ರಚಾರ ಸಮಿತಿ ಮಾಡಲಿದೆ ಎಂದು ರಾಯಸಂದ್ರರವಿಕುಮಾರ್ ತಿಳಿಸಿದರು.
ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ, ಜೆಡಿಎಸ್ ಎರಡು ಪಕ್ಷಗಳೂ ಸಮಾನ ಎದುರಾಳಿಗಳು, ಯಾರ ಬಗ್ಗೆಯೂ ಕನಿಕರವಿಲ್ಲ. ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಅಧಿಕಾರದಲ್ಲಿದ್ದಾಗ ಆಗಿರುವ ಜನವಿರೋಧಿ ನೀತಿಗಳನ್ನು ಜನತೆಯ ಮುಂದಿಟ್ಟು ಕಾಂಗ್ರೆಸ್ ಪಕ್ಷವಾಗಿ ಬಹಳ ಗಟ್ಟಿ ದ್ವನಿಯಲ್ಲಿ ಮತ ಕೇಳಲು ಕಾಂಗ್ರೆಸ್ ಪ್ರಚಾರ ಸಮಿತಿ ಸಿದ್ದವಿದೆ. ಮುಂದಿನ ದಿನಗಳಲ್ಲಿ ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ಸಭೆ, ಸಾಮಾರಂಭಗಳು ನಡೆಯಲಿವೆ ಎಂದು ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ರಾಯಸಂದ್ರರವಿಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಸಂಯೋಜಕರಾದ ಇಕ್ಬಾಲ್ ಅಹಮದ್, ಚಿಕ್ಕರಂಗಯ್ಯ, ಜಯರಾಮಯ್ಯ,ಎಸ್.ಎಲ್.ಎನ್.ಸ್ವಾಮಿ,ಜಿಲ್ಲಾ ಸಂಯೋಜಕರಾದ ರಾಜಕುಮಾರ್, ಚಕ್ರವರ್ತಿ ಪ್ರಕಾಶ್, ಸಿ.ಭಾನುಪ್ರಕಾಶ್, ಮಾರುತಿ, ದೊಡ್ಡಯ್ಯ,ಜಗದೀಶ್,ಮಳೇಹಳ್ಳಿ ಮಲ್ಲಿಕಾರ್ಜುನ,ಕಲ್ಲಹಳ್ಳಿ ಮಹಾಲಿಂಗಪ್ಪ, ಹೇರೂರು ಗುರುಪ್ರಸಾದ್, ರೇಣುಕಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.