ತುಮಕೂರು
ಸರಕಾರಿ ಕನ್ನಡ ಶಾಲೆಗಳು ಉಳಿಯಬೇಕಾದರೆ, ಶಿಕ್ಷಕರು, ಎಸ್.ಡಿ.ಎಂ.ಸಿ ಹಾಗೂ ಮಕ್ಕಳ ಪೋಷಕರು ಪರಸ್ವರ ಒಗ್ಗೂಡಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿದಾಗ ಮಾತ್ರ ಸಾಧ್ಯ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.
ನಗರದ ಶಿರಾಗೇಟ್‌ನ ಉತ್ತರಬಡಾವಣೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಕೆ.ಎನ್.ಆರ್. ಮತ್ತು ಆರ್.ಆರ್.ಅಭಿಮಾನಿ ಬಳಗ, ಹಳೆ ವಿದ್ಯಾರ್ಥಿಗಳ ಸಂಘ,ಎಸ್.ಡಿ.ಎA.ಸಿ ಆಡಳಿತ ಮಂಡಳಿ ಹಾಗೂ ಪೋಷಕರು ಆಯೋಜಿಸಿದ್ದ ಉಚಿತ ಲೇಖನ ಸಾಮಗ್ರಿ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗದAತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ನಗರಪಾಲಿಕೆಯ ಎರಡನೇ ವಾರ್ಡಿನ ಸದಸ್ಯ ಎಸ್.ಮಂಜುನಾಥ ಮಾತನಾಡಿ, ಕನ್ನಡ ಮಾಧ್ಯಮ ಶಾಲೆಗಳು ಇಂದು ಅದೋಗತಿಗೆ ತಲುಪಿವೆ.ಆದರೂ ನಮ್ಮ ಉತ್ತರ ಬಡಾವಣೆಯ ಶಾಲೆ ದಿನದಿಂದ ದಿನಕ್ಕೆ ಅಭಿವೃದ್ದಿ ಪಥದಲ್ಲಿ ಸಾಗಿದೆ. ಇದಕ್ಕೆ ಶಾಲೆಯ ಪದವಿಧರ ಮುಖ್ಯಶಿಕ್ಷಕರಾದ ಡಿ.ಎಸ್.ಶಿವಸ್ವಾಮಿ ಮತ್ತು ಎಸ್.ಡಿ.ಎಂ.ಸಿ ಮಂಡಳಿ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘ ಕಾರಣ.ಶಾಲೆಯ ಶಿಕ್ಷಕರ ಜೊತೆಯಲ್ಲಿ ಎಲ್ಲರೂ ಒಗ್ಗೂಡಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿದ್ದಾರೆ.ಎಸ್.ಡಿ.ಎಂ.ಸಿ ಸಕ್ರಿಯವಾಗಿದ್ದು,ಕಾಲ ಕಾಲಕ್ಕೆ ಶಾಲೆಗೆ ಭೇಟಿ ನೀಡಿ, ಶಿಕ್ಷಕರು, ಮಕ್ಕಳ ಮನವಿಗಳನ್ನು ಆಲಿಸಿ ಪರಿಹರಿಸುವ ಕೆಲಸ ಮಾಡುತಿದ್ದಾರೆ. ಇದರ ಪರಿಣಾಮ ಶಾಲೆಯ ಅಭಿವೃದಿ ಹೊಂದಿ, ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಓಬಳಯ್ಯ ಮಾತನಾಡಿ,ಸುತ್ತಮುತ್ತಲ ಹತ್ತಾರು ಕನ್ನಡ ಮಾಧ್ಯಮ ಶಾಲೆಗಳು ಮುಚ್ಚಿದ್ದರೂ ನಮ್ಮ ಶಾಲೆಯ ದಾಖಲಾತಿ ಸಂಖ್ಯೆ ಹೆಚ್ಚಿದೆ. ಇದಕ್ಕೆ ಕಾರಣ, ಒಳ್ಳೆಯ ಕಟ್ಟಡ, ಗುಣಮಟ್ಟದ ಬೋಧನೆ ಮತ್ತು ಪಠ್ಯೇತರ ಚಟುವಟಿಕೆಗಳು. ಒಂದು ಮಾಹಿತಿ ಪ್ರಕಾರ ತುಮಕೂರು ಜಿಲ್ಲೆಯ ೬೪ ಕನ್ನಡ ಮಾಧ್ಯಮ ಶಾಲೆಗಳು ದಾಖಲಾತಿ ಕೊರತೆಯಿಂದ ಮುಚ್ಚುವ ಹಂತದಲ್ಲಿವೆ.ಇದಕ್ಕೆ ಕಾರಣ ಅಲ್ಲಿನ ಶಿಕ್ಷಕರು ಮತ್ತು ಆಡಳಿತ ಮಂಡಳಿ.ಶಾಲೆಗಳು ಕೇವಲ ಭೌತಿಕವಾಗಿ ಅಭಿವೃದ್ದಿಯಾದರೆ ಸಾಲದು,ಮಕ್ಕಳ ಭೌದ್ಧಿಕ ಅಭಿವೃದ್ದಿಯ ಕಡೆಗೂ ಗಮನಹರಿಸಬೇಕಾಗಿದೆ ಎಂದರು.
ಶಾಲೆ ಪದವಿಧರ ಮುಖ್ಯಶಿಕ್ಷಕ ಡಿ.ಎಸ್,ಶಿವಸ್ವಾಮಿ ಮಾತನಾಡಿ,ಈ ವರ್ಷ ನಮ್ಮ ಶಾಲೆಯಲ್ಲಿ ೫೬೦ ಮಕ್ಕಳು ಓದುತ್ತಿದ್ದಾರೆ. ಪ್ರತಿವರ್ಷ ದಾಖಲಾಗುವವರ ಸಂಖ್ಯೆ ಹೆಚ್ಚಾಗಿದೆ.ಐದಾರು ಕಿ.ಮಿ.ದೂರದಿಂದ ಮಕ್ಕಳ ನಮ್ಮ ಶಾಲೆಗೆ ಕಲಿಯಲು ಬರುತ್ತಿದ್ದಾರೆ. ಇದಕ್ಕೆ ಕಾರಣ ಗುಣಮಟ್ಟದ ಶಿಕ್ಷಣ.ಕಳೆದ ವರ್ಷ ಪ್ರತಿ ಮಗುವಿಗೆ ಒಂದು ಸಾವಿರ ರೂಗಳ ಮೌಲ್ಯದ ನೋಟ್ಸ್ ಮತ್ತು ಲೇಖನ ಸಾಮಗ್ರಿಗಳನ್ನು ಎಲ್ಲಾ ಮಕ್ಕಳಿಗೆ ವಿತರಿಸಲಾಗಿತ್ತು. ಈ ವರ್ಷವೂ ಸುಮಾರು ೨.೧೦ ಲಕ್ಷ ರೂಗಳ ಲೇಖನ ಸಾಮಗ್ರಿಗಳನ್ನು ಕೆ.ಎನ್.ಆರ್ ಮತ್ತು ಆರ್.ಆರ್.ಅಭಿಮಾನಿ ಬಳಗ ನೀಡುತ್ತಿದೆ.ಇದರ ಜೊತೆಗೆ ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ಎಸ್.ಡಿ.ಎಂ.ಸಿ ಸಹ ನಮಗೆ ಸಹಕಾರ ನೀಡುತ್ತಿದೆ.ಶಾಲೆಯಲ್ಲಿ ಕಲೋತ್ಸವದ ಜೊತೆಗೆ, ೧೬೦ ಗಿಡಗಳನ್ನು ನೆಟ್ಟು ಹಸಿರೀಕರಣಕ್ಕೆ ಒತ್ತು ನೀಡಲಾಗಿದೆ. ನಮ್ಮ ಶಾಲೆ ಖಾಸಗಿ ಶಾಲೆಯನ್ನು ನಾಚಿಸುವಂತಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಮಕ್ಕಳಿಗೆ ನೋಟ್ಸ್ ಪುಸ್ತಕ ವಿತರಿಸಲಾಯಿತು. ವೇದಿಕೆಯಲ್ಲಿ ಶಾಲೆಯ ಪದವಿಧರ ಮುಖ್ಯಶಿಕ್ಷಕ ಎಸ್.ಡಿ.ಶಿವಸ್ವಾಮಿ, ಎಸ್.ಡಿ.ಎಂ.ಸಿ ಸದಸ್ಯರುಗಳಾದ ಜಬೀನಾ,ನೀಲಮ್ಮ,ವಿಜಯಕುಮಾರಿ,ಅರುಣಕುಮಾರಿ,ಮಂಜುಳ,ಭಾಗ್ಯಮ್ಮ,ಹನುಮ ರಂಗಯ್ಯ, ಬಸವನಗೌಡ, ಪುಷ್ಪ, ಭರತಕುಮಾರ್ ಹಗೂ ಶಾಲೆಯ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.