ತುಮಕೂರು; ವಿದ್ಯಾರ್ಥಿಗಳು ತ್ಯಾಗ ಮತ್ತು ಸತ್ಯದ ಮನೋಭಾವನೆ ಬೆಳೆಸಿಕೊಂಡರೆ, ಸಾಧನೆಯ ಮಾರ್ಗದಲ್ಲಿ ನಡೆಯಲು ಸಹಕಾರಿಯಾಗುತ್ತದೆ ಎಂದು ನಿವೃತ್ತಿ ಐಜಿಪಿ ಶಂಕರ ಬಿದರಿ ಅಭಿಪ್ರಾಯಪಟ್ಟಿದ್ದಾರೆ.
ಸಿದ್ದಗಂಗಾ ಮಠದಲ್ಲಿ ಸಿದ್ದಗಂಗಾ ವಿದ್ಯಾರ್ಥಿ ಸಂಘ, ಸನಿವಾಸ ವಿದ್ಯಾಸಂಸ್ಥೆಗಳು ಹಾಗೂ ಶ್ರೀಸಿದ್ದಗಂಗಾ ಮಠವತಿಯಿಂದ ಅಯೋಜಿಸಿದ್ದ ಹಿರಿಯ ಚಲನಚಿತ್ರನಟ ದೊಡ್ಡಣ್ಣ ಅವರ ಹುಟ್ಟು ಹಬ್ಬ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಇಂದು ನೇರವಾದ, ಸತ್ಯದ ಹಾಗೂ ಪ್ರಾಮಾಣಿಕ ಮಾರ್ಗದಲ್ಲಿ ನಡೆಯುವವರ ಸಂಖ್ಯೆ ಕಡಿಮೆಯಾಗಿದೆ.ಪ್ರತಿಯೊಬ್ಬರು ಬೇರೆಯವರಿಂದ ಪ್ರಾಮಾಣಿಕತೆ, ಸತ್ಯ,ನೇರವಾದ ಮಾರ್ಗಗಳನ್ನು ಬಯಸುತ್ತಾರೆ. ಅದು ತಮ್ಮಿಂದಲೇ ಆರಂಭವಾಗಬೇಕು.ಆಗಲೇ ದೇಶದಲ್ಲಿ ಪರಿವರ್ತನೆ ಸಾಧ್ಯ ಎಂದರು.
ನೀವು ಗಳಿಸುವ ಅಂಕಗಳು ಉದ್ಯೋಗ ಪಡೆಯಲು ಮಾತ್ರ.ಉದ್ಯೋಗಕ್ಕೆ ಸೇರಿದ ನಂತರ ನಿಮ್ಮ ಪ್ರಾಮಾಣಿಕತೆ, ಸಹದ್ಯೊಗಿಗಳೊಂದಿಗಿನ ನಡವಳಿಕೆ,ಇತರರ ಕಷ್ಟ,ಸುಖಃಗಳಿಗೆ ಸ್ಪಂದಿಸುವ ಗುಣ ಎಲ್ಲವೂ ನಿಮ್ಮನ್ನು ಮೇಲ್ಮಟ್ಟಕ್ಕೆ ತೆಗೆದು ಕೊಂಡು ಹೋಗುತ್ತದೆ.ಬಹುಸಂಸ್ಕೃತಿಯ ನಾಡಾದ ಭಾರತದಲ್ಲಿ ಎಲ್ಲಾ ಧರ್ಮ,ಜಾತಿ,ಭಾಷೆಗಳ ಜನರು ಒಗ್ಗೂಡಿ ಭಾರತಾಂಭೆಯ ಮಕ್ಕಳಂತೆ ಬದುಕುಬೇಕಾಗಿದೆ.ಬಸಣ್ಣನವರ ವಚನದಂತೆ ಇವ ನಮ್ಮವ ಎಂದು ಕೊಂಡು ಶಾಂತಿ, ಸೌಹಾರ್ಧತೆಯಿಂದ ಬದುಕುವಂತಹ ವಾತಾವರಣ ನಿರ್ಮಾಣ ಮಾಡಬೇಕಾಗಿದೆ.ಪರಸ್ವರ ಗೌರವದೊಂದಿಗೆ ಬದುಕು ವಂತಹ ವಾತಾವರಣ ಸೃಷ್ಟಿಯಾಗಬೇಕೆಂದರು.
ಚಿತ್ರನಟ ದೊಡ್ಡಣ್ಣ ಮಾತನಾಡಿ, ಪ್ರತಿವರ್ಷ ನನ್ನ ಹುಟ್ಟು ಹಬ್ಬವನ್ನು ಸಿದ್ದಗಂಗಾ ಮಠದ ವಿದ್ಯಾರ್ಥಿಗಳಿಗೆ ಆರೋಗ್ಯ ಶಿಬಿರ ಏರ್ಪಡಿಸುವ ಮೂಲಕ ಆಚರಿಸಿಕೊಂಡು ಬರುತ್ತಿದ್ದೇನೆ. ಈ ಬಾರಿಯೂ ಸಿದ್ದಗಂಗಾ ಆಸ್ಪತ್ರೆಯ ಜೊತೆಗೆ, ಶಂಕರ್ ಕಣ್ಣಿನ ಆಸ್ಪತ್ರೆ, ಡಾ.ರಾಜ್‌ಕುಮಾರ ಟ್ರಸ್ಟ್(ರಿ),ಎ.ಮಂಜು ಚಾರಿಟಬಲ್ ಟ್ರಸ್ಟ್,ಮೈಕ್ರೋ ಲ್ಯಾಬ್ ಪ್ರ.ಲಿ, ಎನ್.ಪಿ.ಸಿ.ಬಿ. ಡಿವಿಷ್ಹನ್ ಕರ್ನಾಟಕ, ಡಿ.ಎಸ್.ಸಿ.ಡಿ.ಎಸ್ ಆಸ್ಪತ್ರೆ ಸಹಯೋಗದಲ್ಲಿ ಮಕ್ಕಳಿಗೆ ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ. ಈ ಮಠದಲ್ಲಿ ಕಲಿಯುತ್ತಿರುವ ನೀವುಗಳೇ ಪುಣ್ಯವಂತರು.ಇಲ್ಲಿ ವಿದ್ಯೆಯ ಜೊತೆಗೆ, ಸಂಸ್ಕಾರ, ಸಂಸ್ಕೃತಿಗಳ ಪರಿಚಯ ಮಕ್ಕಳಿಗೆ ಆಗುತ್ತದೆ.ಸಿದ್ದಗಂಗಾ ಮಠ ರಾಜ್ಯದಲ್ಲಿರುವ ಜಾತ್ಯಾತೀತ ಮಠಗಳಲ್ಲಿ ಒಂದು.ಇಲ್ಲಿ ಎಲ್ಲ ಜಾತಿಯ ಮಕ್ಕಳು ಕಲಿಯುತ್ತಿ ದ್ದಾರೆ.ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವ ಇಲ್ಲಿ ನೆಲೆಯೂರಿದೆ, 10 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಅನ್ನ,ಅಕ್ಷರ, ಆಶ್ರಯ ನೀಡುವ ಮೂಲಕ ಸಿದ್ದಗಂಗಾ ತ್ರಿವಿಧ ದಾಸೋಹ ಕೇಂದ್ರವಾಗಿದೆ ಎಂದರು.
ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಸಿದ್ದಗಂಗಾ ಮಠಾಧ್ಯಕ್ಷ ಶ್ರೀಶ್ರೀಸಿದ್ದಲಿಂಗಸ್ವಾಮೀಜಿ ಆಶೀರ್ವಚನ ನೀಡಿ,ಇಂದು ದೇಶದ ಮೊದಲ ಪ್ರಧಾನಿ ನೆಹರು ಅವರ ಜನ್ಮ ದಿನ. ಅವರ ಕೋರಿಕೆಯಂತಯೇ ನೆಹರು ಅವರು ಹುಟ್ಟಿದ ದಿನವನ್ನು ಮಕ್ಕಳ ದಿನವೆಂದು ಆಚರಿಸಿಕೊಂಡು ಬರಲಾಗುತ್ತಿದೆ.ಅವರು ದೇಶಕ್ಕೆ ನೀಡಿದ ಅನೇಕ ಯೋಜನೆಗಳ ಫಲವಾಗಿ ಭಾರತ ಇಂದು ವಿಶ್ವ ಭೂಪಟದಲ್ಲಿ ರಾರಾಜಿಸುವಂತಾಗಿದೆ.ನೀರಾವರಿ,ಕೃಷಿ ಮತ್ತು ಕೈಗಾರಿಕೆಗಳಿಗೆ ನೀಡಿದ ಕೊಡುಗೆ ಅಪಾರ.ಅವರ ಬಗ್ಗೆ ಮಕ್ಕಳು ಹೆಚ್ಚು ತಿಳಿಯುವಂತಾಗಲಿ ಎಂದರು.
ಹಿರಿಯ ಚಲನಚಿತ್ರ ನಟ ದೊಡ್ಡಣ್ಣ, ಹೆಸರಿಗಷ್ಟೇ ದೊಡ್ಡಣ್ಣನಲ್ಲ.ಹೃದಯ ಶ್ರೀಮಂತಿಕೆ ಹೊಂದಿರುವ ವ್ಯಕ್ತಿ. ತಮ್ಮ ಹುಟ್ಟು ಹಬ್ಬದ ದಿನದಂದು ಶ್ರೀಮಠಕ್ಕೆ ಬಂದು ಮಕ್ಕಳೊಂದಿಗೆ ಕಾಲ ಕಳೆದು, ಅವರಿಗೆ ಬೇಕಾದ ಸವಲತ್ತುಗಳನ್ನು ನೀಡುತ್ತಾ ಬಂದಿದ್ದಾರೆ. ಅವರ ಈ ಸೇವೆ ನಿರಂತರವಾಗಿ ಮುಂದುವರೆಯಲಿ, ಇನ್ನೂ ಹತ್ತಾರು ವರ್ಷ ಬಾಳಿ, ಬದುಕಲಿ ಎಂದು ಶ್ರೀಸಿದ್ದಲಿಂಗಸ್ವಾಮೀಜಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಸಹಕಾರ ಸಂಘಗಳ ಉಪನಿಬಂಧಕ ಎಂ.ಪಿ.ಮAಜುನಾಥ್,ಡಾ.ರಾಜಕುಮಾರ್ ಟ್ರಸ್ಟ್ನ ಟ್ರಸ್ಟಿ ಟಿ.ವಾಸನ್, ಸಿದ್ದಗಂಗಾ ಆಸ್ಪತ್ರೆಯ ನಿರ್ದೇಶಕ ಡಾ.ಎಸ್.ಪರಮೇಶ್, ಸಹಾಯಕ ಔಷಧ ನಿಯಂತ್ರಣಾಧಿಕಾರಿ ಶ್ರೀಮತಿ ಮಮತ, ಸಾಗರನಹಳ್ಳಿ ನಟರಾಜು,ಶಂಕರ್ ಕಣ್ಣಿನ ಆಸ್ಪತ್ರೆಯ ಯೂನಿಟ್ ಹೆಡ್ ಲೆ.ಕರ್ನಲ್ ಎಸ್.ಗುರುಪ್ರಸಾದ್, ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷಷ ಎಸ್.ಮಂಜುನಾಥ್ ಭಾಗವಹಿಸಿದ್ದರು.
ಆರೋಗ್ಯ ಶಿಬಿರಕ್ಕೆ ಮೈಕ್ರೋ ಲ್ಯಾಬ್ ಬೆಂಗಳೂರು, ಮೋಹನ್ ಮತ್ತು ಕೋ ಬೆಂಗಳೂರು,ಮಿನೋವ ಲೈಫ್ ಬೆಂಗಳೂರು, ಎಸ್ಸಾರ್ ಫಾರ್ಮ್ ಬೆಂಗಳೂರು, ಬಯೋ ಫಾರ್ಮು ಬೆಂಗಳೂರು ಸೇರಿದಂತೆ ವಿವಿಧ ಔಷಧ ಕಂಪನಿಗಳು ಪ್ರಯೋಜಕತ್ವ ವಹಿಸಿದ್ದವು.