ತುಮಕೂರು: ಆರ್ಥಿಕ, ಸಾಮಾಜಿಕ ಸಮಾನತೆ ಇಲ್ಲವಾದರೆ ಅದು ಸ್ವತಂತ್ರ ದೇಶವಲ್ಲ. ಅಸ್ಪೃಶ್ಯತೆಯನ್ನು ಸಂಪೂರ್ಣ ಹೋಗಲಾಡಿಸಿ ಸರ್ವರಿಗೂ ಘನತೆಯ ಬದುಕನ್ನು ಕಟ್ಟಿಕೊಡುವ ದೇಶ ಎಂದಿಗೂ ಸ್ವತಂತ್ರ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕ ಡಾ. ಬಿ. ಎಂ. ಪುಟ್ಟಯ್ಯ ಹೇಳಿದರು.
ತುಮಕೂರು ವಿಶ್ವವಿದ್ಯಾಲಯದ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರವು ಶುಕ್ರವಾರ ಆಯೋಜಿಸಿದ್ದ ಡಾ. ಬಿ. ಆರ್. ಅಂಬೇಡ್ಕರ್ ಅವರ 68ನೆಯ ಮಹಾಪರಿನಿಬ್ಬಾಣ ದಿನಾಚರಣೆಯಲ್ಲಿ ಮಾತನಾಡಿದರು.
ಧರ್ಮದ ಲೇಪ ಹಚ್ಚಿ ಸಮಾನತೆಯನ್ನು ಸೀಮಿತಗೊಳಿಸುತ್ತಿರುವ ದುಷ್ಟಶಕ್ತಿಗಳ ವಿರುದ್ಧ ಅಂಬೇಡ್ಕರ್ ಅವರು ಹೋರಾಡಿದರು. ಬ್ರಿಟಿಷ್ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಅವಧಿಯಲ್ಲಿ ಮಹಿಳೆಯರಿಗೆ ಹೆರಿಗೆ ರಜೆ ಘೋಷಿಸಿದರು. ಹಿಂದೂ ನಾಗರಿಕ ಸಂಹಿತೆಯ ಕಾನೂನು ಪರಿಚಯಿಸಿ ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಸಿಗುವಂತೆ ಮಾಡಿದರು ಎಂದು ತಿಳಿಸಿದರು. ಮಹಿಳೆಯರಿಗೆ ಆರ್ಥಿಕ ಸಮಾನತೆ ನೀಡದೆ, ಮುಟ್ಟಾದ ಹೆಣ್ಣನ್ನು ಅಸ್ಪೃಶ್ಯಳಂತೆ ಕಂಡು, ಮಗು ಹೆರಿಗೆಯಾದರೆ ಅದನ್ನು ಸೂತಕವೆಂದು ಪರಿಗಣಿಸಿ ಸಮಾಜದಿಂದ ಹೊರಗಿಟ್ಟಿರುವುದು ಬೇಸರದ ಸಂಗತಿ. ಸಂವಿಧಾನವನ್ನು ಕೇವಲ ಆಳ್ವಿಕೆ ಮಾಡುಲು ಬಳಸುತ್ತಿರುವ ಸರ್ಕಾರಗಳಿಗೆ ಸಾಮಾಜಿಕ ಶಕ್ತಿಯ, ಸೋದರ ಮನೋಭಾವದ, ಸ್ವತಂತ್ರö ದೇಶವನ್ನು ನಿರ್ಮಿಸುವ ಆಲೋಚನೆ ಜೀವಕಳೆದುಕೊಂಡಿದೆ ಎಂದರು. ಐದೂವರೆ ಸಾವಿರ ವರ್ಷಗಳಿಂದ ಕೆಳವರ್ಗದವರನ್ನು ಶೋಷಿಸುತ್ತಲೇ ಬರುತ್ತಿರುವ ಸಮಾಜ ಸ್ವತಂತ್ರವಾಗುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ದಲಿತ ಸಮುದಾಯದವರನ್ನು ಇಂದಿಗೂ ಅಪಮಾನದಿಂದ, ಅವಮಾನದಿಂದ, ಅನುಮಾನದಿಂದ ಮೇಲ್ಜಾತಿಯವರು ಕಾಣುತ್ತಿರುವುದು ಸಂವಿಧಾನಕ್ಕೆ ತೋರುತ್ತಿರುವ ಅಗೌರವ. ಈ ಎಲ್ಲ ಸಮಸ್ಯೆಗಳಿಗೂ ಮದ್ದು ಶಿಕ್ಷಣ ಎಂದು ತಿಳಿಸಿದರು. ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಮಾತನಾಡಿ, ಸಮಾನತೆಯ ಭಾರತವನ್ನು ಕಟ್ಟಲು ಅಂಬೇಡ್ಕರ್ ಬದುಕನ್ನು ತ್ಯಾಗ ಮಾಡಿದರು. ಎಲ್ಲವೂ ಕಾನೂನಿಂದ ಬದಲಾಯಿಸಲು ಸಾಧ್ಯವಿಲ್ಲ. ಮಾನವೀಯತೆ, ಪ್ರೀತಿ, ಗೌರವ ಭಾವದಿಂದ, ಶಿಕ್ಷಣದಿಂದ ಸಮಾಜದ ಕೆಡಕುಗಳನ್ನು ತೊಡೆದುಹಾಕಬಹುದು ಎಂದರು. ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ಕೇಶವ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನ ಕುಮಾರ್ ಕೆ. ಉಪಸ್ಥಿತರಿದ್ದರು. ಸಹ ಪ್ರಾಧ್ಯಾಪಕರಾದ ಡಾ. ರೂಪೇಶ್ ಕುಮಾರ್ ಎ. ನಿರೂಪಿಸಿದರು. ಡಾ. ಮಹಾಲಿಂಗ ಕೆ. ವಂದಿಸಿದರು.
(Visited 1 times, 1 visits today)