ತುಮಕೂರು: ವಿದ್ಯಾರ್ಥಿಗಳು ಉತ್ತಮ ಕಲಿಕೆಯೊಂದಿಗೆ ದೇಶದ ಮುಂದಿನ ಸಂಪದ್ಭರಿತ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಡಯಟ್ ಪ್ರಾಂಶುಪಾಲರಾದ ಕೆ. ಮಂಜುನಾಥ್ ಕರೆ ನೀಡಿದರು.
ತಾಲ್ಲೂಕಿನ ಗೊಲ್ಲಹಳ್ಳಿ ಬಳಿ ಇರುವ ಜವಹರ್ ನವೋದಯ ವಿದ್ಯಾಲಯದಲ್ಲಿ ಏರ್ಪಡಿಸಿದ್ದ 36ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಪಠ್ಯ ಮತ್ತು ಪಠ್ಯೇತರ ಜ್ಞಾನ ಪಡೆಯುತ್ತಿರುವ ವಿದ್ಯಾರ್ಥಿಗಳು ತಮ್ಮ ಮುಂದಿನ ಹೆಜ್ಜೆಯನ್ನು ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಇಡಬೇಕು. ಈ ಮೂಲಕ ಹೆತ್ತವರು ಹಾಗೂ ಶಾಲೆಯ ಶಿಕ್ಷಕರ ಕನಸನ್ನು ಈಡೇರಿಸಬೇಕು ಎಂದು ಸಲಹೆ ನೀಡಿದರು.
ಈ ಹಿಂದೆ ಋಷಿಮುನಿಗಳ ಆಶ್ರಮದಲ್ಲಿ ಇದ್ದ ಶಿಕ್ಷಣ ಕಲಿಕೆಯ ಪರಿಕಲ್ಪನೆಯಲ್ಲಿ ಜವಹರ್ ನವೋದಯ ವಿದ್ಯಾಲಯದಲ್ಲಿ ಮಕ್ಕಳಿಗೆ ಶಿಕ್ಷಣ ದೊರೆಯುತ್ತಿದೆ. ಈ ಶಾಲೆಯಲ್ಲಿ ಕಲಿಯುವ ಅವಕಾಶ ಎಲ್ಲ ಮಕ್ಕಳಿಗೂ ಸಿಗುವುದಿಲ್ಲ. ಇಲ್ಲಿ ಕಲಿಯುತ್ತಿರುವ ಮಕ್ಕಳ ಪೂರ್ವಜನ್ಮದ ಪುಣ್ಯ ಎಂದರು.
1986 ರಲ್ಲಿ ಅಂದಿನ ಪ್ರಧಾನಿಗಳು ಇಡೀ ದೇಶಕ್ಕೆ ನೀಡಿದ ಬಹುದೊಡ್ಡ ಕೊಡುಗೆ ನವೋದಯ ವಿದ್ಯಾಲಯ. ಅಂದು ಅವರು ರೂಪಿಸಿದ ಶಿಕ್ಷಣ ನೀತಿ ಲಕ್ಷಾಂತರ ಮಕ್ಕಳ ಉತ್ತಮ ಭವಿಷ್ಯಕ್ಕೆ ನಾಂದಿಯಾಗಿದೆ ಎಂದು ಅವರು ಹೇಳಿದರು.
ದೇಶದ ಎಲ್ಲ ಜಿಲ್ಲೆಗಳಲ್ಲಿ ನವೋದಯ ವಿದ್ಯಾಲಯ ತೆರೆಯಲು ಅಂದು ನಿರ್ಧಾರ ಕೈಗೊಂಡಿದ್ದರ ಫಲ ಇಂದು ಸಾಕಷ್ಟು ಪ್ರತಿಭೆಗಳಿಗೆ ಅವಕಾಶ ದೊರೆತಿದೆ. ನವೋದಯ ವಿದ್ಯಾಲಯದಲ್ಲಿ ತಮ್ಮ ಮಕ್ಕಳಿಗೆ ಸೀಟು ಪಡೆಯಬೇಕು ಎಂಬ ಹಂಬವ ಎಲ್ಲ ಪೋಷಕರದ್ದಾಗಿರುತ್ತದೆ. ಆದರೆ ಕೆಲವೇ ಕೆಲವು ಮಂದಿಗೆ ಮಾತ್ರ ಈ ಅವಕಾಶ ದೊರೆಯುತ್ತದೆ ಎಂದರು.
ಜವಹರ್ ನವೋದಯ ವಿದ್ಯಾಲಯ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಾ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ನೀಡುತ್ತಿದೆ. ಅದರಲ್ಲೂ ತುಮಕೂರು ನವೋದಯ ಶಾಲೆ ಉತ್ತಮವಾಗಿ, ಬಹಳ ವ್ಯವಸ್ಥಿತವಾಗಿ ಶಿಕ್ಷಣ ನೀಡುವ ಮೂಲಕ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುತ್ತಿದೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು. ನವೋದಯ ವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಕಲಾ, ಉಪಪ್ರಾಂಶುಪಾಲರಾದ ರಮಾದೇವಿ, ಪಾಲ್ಗೊಂಡಿದ್ದರು.
(Visited 1 times, 1 visits today)