ತುಮಕೂರು: ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವ ಘಟನೆಯನ್ನು ಖಂಡಿಸಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ರವರ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ಮುಂದಾಗ ಶಾಸಕ ಸುರೇಶ್‌ಗೌಡ ಸೇರಿದಂತೆ ಹಲವು ಮಂದಿ ಬಿಜೆಪಿ ಕಾರ್ಯಕರ್ತರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವ ಘಟನೆಯನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಇಂದು ಗೃಹ ಸಚಿವರ ನಿವಾಸದ ಮುಂದೆ ಪ್ರತಿಭಟನೆ ನಡೆಸಲು ಕಾರ್ಯಕರ್ತರಿಗೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಗೃಹ ಸಚಿವರ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ನಗರದ ಹೊರವಲಯದ ಸಿದ್ದಾರ್ಥ ನಗರದಲ್ಲಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ನಿವಾಸದ ಮುಂದೆ ಬೆಳಿಗ್ಗೆಯಿಂದಲೇ ಬಿಜೆಪಿ ಪ್ರತಿಭಟನೆ ಕರೆ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಓರ್ವ ಅಡಿಷನಲ್ ಎಸ್ಪಿ, ಇಬ್ಬರು ಡಿವೈಎಸ್ಪಿ ನೇತೃತ್ವದಲ್ಲಿ ಸುಮಾರು 150ಕ್ಕೂ ಅಧಿಕ ಪೊಲೀಸರನ್ನು ಬಿಗಿ ಪೊಲೀಸ್ ಬಂದೋಬಸ್ತ್ಗೆ ನಿಯೋಜಿಸಲಾಗಿದ್ದು, ಪೊಲೀಸರು ಈ ಭಾಗದ ರಸ್ತೆಯಲ್ಲಿ ಸಂಚರಿಸುವ ಕಾರು ಮತ್ತು ಬಸ್‌ಗಳ ತಪಾಸಣಾ ಕಾರ್ಯವನ್ನು ನಡೆಸಿದರು. ಕಾರುಗಳಲ್ಲಿ ಬಂದ ಬಿಜೆಪಿ ಕಾರ್ಯಕರ್ತರನ್ನು ತಪಾಸಣೆ ವೇಳೆ ಪೊಲೀಸರು ವಶಕ್ಕೆ ಪಡೆಯುತ್ತಿದ್ದ ವಿಷಯ ತಿಳಿದ ಶಾಸಕ ಸುರೇಶ್‌ಗೌಡ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ನೇತೃತ್ವದಲ್ಲಿ ಕೆಲ ಬಿಜೆಪಿ ಕಾರ್ಯಕರ್ತರು ನಗರ ಸಾರಿಗೆ ಬಸ್‌ನಲ್ಲಿ ಸಿದ್ದಾರ್ಥ ನಗರಕ್ಕೆ ಆಗಮಿಸಿದರು. ಪೊಲೀಸರು ಕಾರುಗಳ ತಪಾಸಣೆ ನಡೆಸುತ್ತಿದ್ದ ವೇಳೆ ಬಂದ ನಗರ ಸಾರಿಗೆ ಬಸ್ ಪೊಲೀಸರು ಇರುವುದನ್ನು ಕಂಡು ಸಚಿವ ಪರಮೇಶ್ವರ್ ಅವರ ನಿವಾಸದ ಅಣತಿ ದೂರಲ್ಲಿ ಬಸ್ ನಿಧಾನಗತಿಯಲ್ಲಿ ಚಲಿಸಿತು. ಆ ವೇಳೆ ಬಸ್‌ನಲ್ಲಿದ್ದ ಶಾಸಕ ಸುರೇಶ್‌ಗೌಡ ಅವರು ಗುರುತು ಸಿಗದಂತೆ ಮುಖಕ್ಕೆ ಕೇಸರಿ ಬಣ್ಣದ ಬಟ್ಟೆಯನ್ನು ಸುತ್ತಿಕೊಂಡು ಇಳಿದು ಪರಮೇಶ್ವರ್ ನಿವಾಸದತ್ತೆ ತೆರಳಲು ಮುಂದಾದರು.
ಇದನ್ನು ಗಮನಿಸಿದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಸುರೇಶ್‌ಗೌಡ, ರವಿಶಂಕರ್ ಹಾಗೂ ಕಾರ್ಯಕರ್ತರನ್ನು ಸುತ್ತುವರೆದು ವಶಕ್ಕೆ ಪಡೆದರು.
ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ ಶಾಸಕ ಸುರೇಶ್‌ಗೌಡ ಅವರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರ ಹಾಕಿದರು.
ರಾಜ್ಯದಲ್ಲಿ ವಿಕೃತಿ ಮೆರೆಯುವ ಘಟನೆ ನಡೆದಿದೆ. ಇದಕ್ಕೆಲ್ಲಾ ಕಾಂಗ್ರೆಸ್ ಸರ್ಕಾರದ ಹಾಗೂ ಗೃಹ ಸಚಿವರ ಆಡಳಿತ ವೈಫಲ್ಯವೇ ಕಾರಣ ಎಂದು ಬಿಜೆಪಿ ಕಾರ್ಯಕರ್ತರುಗಳು ಘೋಷಣೆಗಳನ್ನು ಕೂಗಿದರು. ಸಚಿವರ ನಿವಾಸದ ಬಳಿ ಬೀಡುಬಿಟ್ಟಿದ್ದ 200ಕ್ಕೂ ಹೆಚ್ಚು ಮನೆಗೆ ಮುತ್ತಿಗೆ ಹಾಕಲು ಬಂದ ಮುಖಂಡರನ್ನು ಪ್ರತ್ಯೇಕವಾಗಿ ವಶಕ್ಕೆ ಪಡೆದು ನಗರದ ಚಿಲುಮೆ ಸಮುದಾಯ ಭವನಕ್ಕೆ ಕರೆದೊಯ್ದರು. ಶಾಸಕ ಬಿ.ಸುರೇಶ್‌ಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ ಸೇರಿದಂತೆ ಹಲವು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.
(Visited 1 times, 1 visits today)