ತುಮಕೂರು: ಜನವರಿ 17 ರಿಂದ 19 ರವರೆಗೆ ಬಹುತ್ವ ಸಂಸ್ಕೃತಿ ಭಾರತೋತ್ಸವವನ್ನು ಕಲಬುರಗಿ ಮಹಾನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಡಾ. ಎಸ್.ವೈ. ಗುರುಶಾಂತ್ ತಿಳಿಸಿದರು.
ಅವರು ತುಮಕೂರಿನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಏಕ ಸಂಸ್ಕೃತಿಯನ್ನು ಹೇರುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿರುವುದು ಇತ್ತಿಚಿನ ದಿನಗಳಲ್ಲಿ ಎದ್ದು ಕಾಣುತ್ತಿದೆ. ಬಹುಸಂಸ್ಕೃತಿಯು ಭಾರತದ ಹೆಗ್ಗುರುತು. ವೈವಿಧ್ಯತೆಯಲ್ಲಿ ಏಕತೆ ಭಾರತದ ವಿಶಿಷ್ಟತೆ. ಇಂತಹ ಬಹುತ್ವ ಭಾರತದ ಮೇಲೆ ವೈದಿಕ ಧಾರ್ಮಿಕತೆಯ ಯಜಮಾನಿಕೆಯ ಏಕ ಸಂಸ್ಕೃತಿಯನ್ನು ಹೇರುವ ಪ್ರಯತ್ನಗಳು ನಡೆಯುತ್ತಿರುವುದು ಆತಂಕಕಾರಿಯಾಗಿದ್ದು ಇದನ್ನು ವಿರೋಧಿಸಿ ‘ಬಹುತ್ವ ಸಂಸ್ಕೃತಿ ಭಾರತೋತ್ಸವ’ ವನ್ನು ಇದೇ 2025 ಜನವರಿ 17 ರಿಂದ 19 ರವರೆಗೆ ಕಲ್ಬುರ್ಗಿ ಮಹಾನಗರದಲ್ಲಿ ಆಯೋಜಿಸಲಾಗುತ್ತಿದೆ. ಸುಮಾರು ಐವತ್ತಕ್ಕೂ ಅಧಿಕ ವಿವಿಧ ಜನ ಸಂಘಟನೆಗಳು ಒಡಗೂಡಿದ ‘ಸೌಹಾರ್ದ ಕರ್ನಾಟಕ’ ವು ವ್ಯವಸ್ಥೆಗೊಳಿಸುತ್ತಿದ್ದು ರಾಜ್ಯದ ವಿವಿದೆಡೆಗಳಿಂದ 5000ಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ನೆಲಮೂಲ ಸಂಸ್ಕ್ರತಿಗಳನ್ನು ತುಳಿದಿಕ್ಕಿ, ವೈದಿಕ ಧಾರ್ಮಿಕತೆಯನ್ನೇ ಭಾರತೀಯ ಸಂಸ್ಕೃತಿ ಎಂದು ಬಿಂಬಿಸುವ ಹುನ್ನಾರಗಳನ್ನು ವಿರೋಧಿಸಿ ‘ಬಹುತ್ವ ಭಾರತ, ಸಶಕ್ತ ಭಾರತ’ ಎನ್ನುವ ಪ್ರತಿಪಾದನೆಯಡಿ ಈ ಮೇಲಿನ ಬಹುತ್ವ ಸಂಸ್ಕೃತಿ ಭಾರತೋತ್ಸವವನ್ನು ಏರ್ಪಡಿಸಲಾಗಿದೆ ಎಂದರು.
ವಚನ ದರ್ಶನ ಕೃತಿಯ ಮೂಲಕ ವಚನಗಳ ವೈದಿಕಿಕರಣ ಹುನ್ನಾರ ನಡೆಸಲಾಗಿದೆ. ವಚನಗಳನ್ನು ವೇಧ, ಉಪನಿಷತ್ತುಗಳ ಮುಂದುವರಿದ ಭಾಗ ಎಂದು ಹೇಳುವ ಮೂಲಕ ಬಹುತ್ವ ಸಂಸ್ಕೃತಿಗೆ ಅಪಚಾರವೆಸಗಲಾಗುತ್ತಿದೆ ಎಂದು ದೂರಿದರು. ಕರ್ನಾಟಕ ಅದರಲ್ಲೂ ಮುಖ್ಯವಾಗಿ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕಗಳು ಕೋಮು ಸೌಹಾರ್ದತೆ, ಸಾಮರಸ್ಯ ಸಂಸ್ಕೃತಿಯ ನೆಲೆವೀಡಾಗಿದೆ. ಆಚಾರ, ವಿಚಾರ, ಹಬ್ಬ, ಸಾಮಾಜಿಕ ಧಾರ್ಮಿಕ ಉತ್ಸವಗಳಲ್ಲಿ, ಜನ ಜೀವನದಲ್ಲಿಯೂ ಇವು ಹಾಸು ಹೊಕ್ಕಾಗಿವೆ. ಶರಣ ಬಸಪ್ಪ ಅಪ್ಪ ದೇವಸ್ಥಾನ – ಖಾಜಾ ಬಂದೇ ನವಾಜ ದರ್ಗಾ, ತಿಂತಿಣಿ ಮೌನೇಶ್ವರ, ಚಾಂಗಿದೇವ, ಶಿಶುನಾಳ ಶರೀಫ-ಗುರು ಗೋವಿಂದ ಭಟ್ಟ, ಬಾಬಾ ಬುಡನ್ ದರ್ಗಾ ದತ್ತಪೀಠ, ಮುಂತಾದ ಶರಣರು, ಸೂಫಿ ಸಂತರು, ತತ್ವ ಪದಕಾರರ ಪರಂಪರೆ ಉಜ್ವಲವಾದುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಎಸ್.ಎ.ಖಾನ್, ರೈತ ಸಂಘದ ಎ. ಗೋವಿಂದರಾಜು, ತಾಜುದ್ದಿನ್, ಅರುಣ್, ಸೈಯದ್‌ಮುಜೀಬ್, ಎನ್.ಕೆ.ಸುಬ್ರಮಣ್ಯ, ಪಿ.ಎನ್. ರಾಮಯ್ಯ, ಅನುಪಮ,ಮಿರ್ಜಬಷೀರ್ ಉಪಸ್ಥತರಿದ್ದರು.
(Visited 1 times, 1 visits today)