ಹುಳಿಯಾರು: ಗಣಿಬಾದಿತ ಪ್ರದೇಶಾಭಿವೃದ್ಧಿಗಾಗಿ ಮೀಸಲಾಗಿರುವ ಗಣಿ ದುಡ್ಡಲ್ಲಿ ಗಣಿಬಾದಿತ ಪ್ರದೇಶದ ಹಳ್ಳಿಗಳಿಗೆ ಮನೆಗೆರಡು ಹಸುಗಳನ್ನು ಕೊಡಿಸುವ ಚಿಂತನೆಯಿದ್ದಿ ಇದಕ್ಕಾಗಿ ಪಶು ಇಲಾಖೆಯಿಂದ ಸಮೀಕ್ಷೆ ಮಾಡಿಸಿ ವರದಿ ಸಲ್ಲಿಸಲಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.
ಚಿಕ್ಕನಾಯಕನಹಳ್ಳಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಗ್ರಾಮ ಪಂಚಾಯ್ತಿ ಸಂಯುಕ್ತ ಆಶ್ರಯದಲ್ಲಿ ಹುಳಿಯಾರು ಹೋಬಳಿಯ ಸೀಗೆಬಾಗಿ ಗೇಟ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಿಶ್ರ ತಳಿ ಹಸುಗಳ ಹಾಲು ಕರೆಯುವ ಸ್ಪರ್ಧೆ ಮತ್ತು ಕರುಗಳ ಪ್ರದರ್ಶನ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ತಾಲೂಕಿನ ಅನೇಕ ಕುಟುಂಬಗಳು ಇಂದು ಹೈನುಗಾರಿಕೆಯಿಂದ ನಡೆಯುತ್ತಿವೆ. ಹಾಗಾಗಿ ಹೈನುಗಾರಿಕೆಗೆ ಉತ್ತೇಜನ ನೀಡುವ ಜೊತೆಗೆ ವೈಜ್ಞಾನಿಕವಾಗಿಯೂ ಖರ್ಚು ಕಡಿಮೆ ಮಾಡಿ ಹಾಲು ಉತ್ಪಾದಿಸುವ ಸಲುವಾಗಿ ಪಶು ಇಲಾಖೆಯ ಸಹಾಯಕ ನಿರ್ದೇಶಕ ರೆ.ಮ.ನಾಗಭೂಷಣ್ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದಾರೆ. ರೈತರನ್ನು ಅಧ್ಯಯನ ಪ್ರವಾಸಕ್ಕೆ ಕರೆದೊಯ್ಯುವ, ಉಚಿತ ತಪಾಸಣಾ ಶಿಬಿರ, ಬರಡು ರಾಸು ಚಿಕಿತ್ಸಾ ಶಿಬಿರ, ತರಬೇತಿ, ಸ್ಪರ್ಧೆ ಹೀಗೆ ಅನೇಕ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದರು. ಹಾಲು ಒಕ್ಕೂಟದಲ್ಲಿ ಈಗ ಗುಣ ಮಟ್ಟದ ಆದಾರದ ಮೇಲೆ ಹಣ ನೀಡುವ ಪದ್ದತಿ ಜಾರಿಯಲ್ಲಿದೆ. ಹಾಗಾಗಿ ಹೆಚ್ಚು ಹಾಲು ಹಾಕುವ ಜೊತೆಗೆ ಗುಣಮಟ್ಟದ ಹಾಲು ಡೇರಿಗೆ ಹಾಕಿದರೆ ಹೆಚ್ಚು ಆದಾಯ ಪಡೆಯಬಹುದು. ಈ ನಿಟ್ಟಿನಲ್ಲಿ ರೈತರು ತಳಿ ಆಯ್ಕೆ, ಪಾಲನೆ, ಪೋಷಣೆ, ಕಾಲಕಾಲಕ್ಕೆ ಲಸಿಕೆ ಹಾಗೂ ಗುಣಮಟ್ಟದ ಮೇವು ನೀಡಲು ಒತ್ತು ನೀಡಬೇಕು ಎಂದರಲ್ಲದೆ ನಾನೂ ಸಹ ಪುಂಗನೂರು ತಳಿಯ 3 ಹಸುಗಳನ್ನು ಮನೆಯಲ್ಲಿ ಸಾಕುತ್ತಿದ್ದೇನೆ ಎಂದು ತಿಳಿಸಿದರು. ತುಮಕೂರು ಹಾಲು ಒಕ್ಕೂಟದ ನೂತನ ನಿರ್ದೇಶಕ ಬುಳ್ಳೇನಹಳ್ಳಿ ಶಿವಪ್ರಕಾಶ್ ಅವರು ಮಾತನಾಡಿ ಹಿಂದೆ ರೈತನ ಮನೆಯಂದರೆ ನಾಟಿ ಹಸುಗಳು ಇರುತ್ತಿದ್ದವು. ಮನೆಯಲ್ಲಿ ಶುದ್ಧ ಹಾಲು, ಮಜ್ಜಿಗೆ, ತುಪ್ಪ ಬಳಸುವ ಜೊತೆಗೆ ಹಸು ಗೊಬ್ಬರದಿಂದ ಬೆಳೆ ಬೆಳೆಯುತ್ತಿದ್ದರು. ಈಗ ಕಾಲ ಬದಲಾಗಿದ್ದು ಹೈನುಗಾರಿಕೆ ಉದ್ಯೋಗವಾಗಿ ಮಾರ್ಪಟ್ಟಿವೆ. ಹೈನುಗಾರಿಕೆಯಿಂದ ಉದ್ಯೋಗಕ್ಕೆ ಗುಳೆ ಹೋಗುವುದು ತಪ್ಪಿದೆ. ಹಾಗಾಗಿ ಹೈನುಗಾರಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಒಕ್ಕೂಟದಿಂದ ಹೈನುಗಾರರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನೂ ಪ್ರಾಮಾಣಿಕವಾಗಿ ತಲುಪಿಸುವ ಪ್ರಯತ್ನವನ್ನು ಮುಂದಿನ ದಿನಗಳಲ್ಲಿ ಮಾಡುವುದಾಗಿ ತಿಳಿಸಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜಕುಮಾರ್, ತಾಪಂ ಮಾಜಿ ಅಧ್ಯಕ್ಷ ಶಶಿಧರ್, ಗ್ರಾಪಂ ಅಧ್ಯಕ್ಷ ಎಚ್.ಎಲ್.ಪುಟ್ಟಸ್ವಾಮಿ, ಉಪಾಧ್ಯಕ್ಷೆ ಚಂದ್ರಮ್ಮ, ಪಶು ಇಲಾಖೆಯ ಸಹಾಯಕ ನಿರ್ದೇಶಕ ರೆ.ಮ.ನಾಗಭೂಷಣ್, ಪಶುವೈದ್ಯಾಧಿಕಾರಿಗಳಾದ ಡಾ.ಮಂಜುನಾಥ್, ಡಾ.ಶಾಂತೇಶ್, ಡಾ.ಯಶದಿತ್ಯ, ಡಾ.ಪ್ರಮೋದ್ ಪಾಲ್, ಸೀಗೆಬಾಗಿ ಡೇರಿ ಅಧ್ಯಕ್ಷ ತಮ್ಮಯ್ಯ, ನಂದಿಹಳ್ಳಿ ಡೇರಿ ಅಧ್ಯಕ್ಷ ಎನ್.ಜಿ.ಶಿವಣ್ಣ, ಟಿ.ಎಸ್.ಹಳ್ಳಿ ಡೇರಿ ಅಧ್ಯಕ್ಷ ಬಸವರಾಜು, ಲಕ್ಷಿö್ಮÃಪುರ ಡೇರಿ ಅಧ್ಯಕ್ಷ ದಿನೇಶ್, ಪಿಡಿಒ ಚಿಕ್ಕಣ್ಣ, ಪ್ರಗತಿಪರ ಹೈನುಗಾರರಾದ ಪ್ರಕಾಶ್, ಸಿದ್ದೇಶ್, ಗ್ರಾಪಂ ಸದಸ್ಯ ಗಂಗಾಧರ್, ವಿಸ್ತರಣಾಧಿಕಾರಿಗಳಾದ ಸುನೀಲ್, ವನಜಾಕ್ಷಿ, ಸಿದ್ದಲಿಂಗಸ್ವಾಮಿ ಮತ್ತಿತರರು ಇದ್ದರು.
(Visited 1 times, 1 visits today)