ತುಮಕೂರು: ಸೌಹಾರ್ಧ ತುಮಕೂರು ವತಿಯಿಂದ ಮಹಾತ್ಮ-ಹುತಾತ್ಮ ಸೌಹಾರ್ಧ ಸಪ್ತಾಹದ ಅಂಗವಾಗಿ ನಗರದ ಟೌನ್ಹಾಲ್ ಮುಂಭಾಗದ ಬಿ.ಜಿ.ಎಸ್.ವೃತ್ತದಲ್ಲಿ ಹಮ್ಮಿಕೊಂಡಿದ್ದ ರಾಜ್ಯವ್ಯಾಪಿ ಸೌಹಾರ್ಧ ಸಂಕಲ್ಪ ದಿನ, ಸಭೆ-ಪ್ರತಿಭೆ-ಸ್ವೀಕಾರ, ಸೌಹಾರ್ಧ ಗೀತೆಗಳ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಕುರಿತು ಮಾತನಾಡಿದ ನಿವೃತ್ತ ನೌಕರರ ಸಂಘದ ಅಧ್ಯಕ್ಷೆ ಬಾ.ಹ.ರಮಾಕುಮಾರಿ,ಧರ್ಮ, ಜಾತಿ, ಭಾಷೆ ಇವೆಲ್ಲವೂ ಜನರ ನಡುವೆ ಸೌಹಾರ್ಧ ಬೆಸೆಯುವ ಅಂಶಗಳು, ಆದರೆ ಇಂದು ಇವುಗಳೇ ಜನರ ನಡುವೆ ದ್ವೇಷ ಬಿತ್ತುವ ವಿಷಯಗಳಾಗಿರುವುದು ನಿಜಕ್ಕೂ ದುರಾದೃಷ್ಟಕರ. ಇಂತಹ ಅಂಶಗಳ ಬಗ್ಗೆ ಜನರು ಯಾವಾಗಲು ಎಚ್ಚರಿಕೆಯಿಂದ ಹೆಜ್ಜೆಗಳ ನಿಡಬೇಕಿದೆ. ಮೊದಲು ನಮ್ಮ ನಡುವೆಯೇ ಸೌಹಾರ್ಧವನ್ನು ಮೈಗೂಡಿಸಿಕೊಂಡು,ನಮ್ಮ ನೆರೆಹೊರೆಯವರನ್ನು ಸಹ ಸೌಹಾರ್ಧದೆಡೆಗೆ ತೆಗೆದುಕೊಂಡು ಹೋಗಬೇಕಾಗಿದೆ.ಆಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದರು.
ಕರ್ನಾಟಕ,ಹಾಗೆಯೇ ತುಮಕೂರು ಜಿಲ್ಲೆ ರಾಷ್ಟçಕವಿ ಕುವೆಂಪು ಅವರ ಮಾತಿನಂತೆ ಶಾಂತಿಯ ತೋಟವಾಗಿದೆ. ನಾವುಗಳು ಇದನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ನಾವೆಲ್ಲರೂ ತಾಳ್ಮೆ, ಸಹನೆಯಿಂದ ವರ್ತಿಸಬೇಕಿದೆ.ಎಲ್ಲ ಧರ್ಮ,ಜಾತಿ, ವರ್ಗದ ಜನರೊಂದಿಗೆ ಸ್ನೇಹದಿಂದ ಬೇರತ ಬಾಳುವುದನ್ನು ಕಲಿಯಬೇಕಾಗಿದೆ.ನಮ್ಮಗಳ ನಡುವೆ ಇರುವ ಗೋಡೆಯನ್ನು ಕೆಡವಿ,ಬಾಂಧವ್ಯ ಬೆಸೆಯುವ ಕೆಲಸ ಮಾಡಬೇಕಾಗಿದೆ ಎಂದು ಬಾ.ಹ.ರಮಾಕುಮಾರಿ ತಿಳಿಸಿದರು.
ಸಾಹಿತಿ ಡಾ.ಶೈಲಾನಾಗರಾಜು ಮಾತನಾಡಿ,ನಾವು ಹಲವಾರು ದಾರ್ಶನಿಕರ ಬರಹಗಳನ್ನು ಓದುತ್ತೇವೆಯೇ ಹೊರತು, ಅದರಂತೆ ನಡೆದುಕೊಳ್ಳುವುದಿಲ್ಲ. ಇದು ಯೂರೋಪ್ಗೂ ಹರಡುವ ಸಾಧ್ಯತೆ ಇದೆ.ವಿದೇಶಿ ಗಣ್ಯರು ಬಂದರೆ ರಾಜ್ಘಾಟ್ಗೆ ಕರೆದುಕೊಂಡು ಹೋಗುವ ಪ್ರಧಾನಿ ಮತ್ತು ಸಂಸದರು ನಾಥೂರಾಮ್ ಗೂಡ್ಸೆಯನ್ನು ಆಧಾರಿಸುತ್ತಾರೆ. ಈ ರೀತಿಯ ನಾಟಕೀಯ ಭಕ್ತಿಯ ಮುಖವಾಡವನ್ನು ಕಳಚಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಾಟಕಕಾರ ಎಸ್.ಎ.ಖಾನ್,ದಲಿತ ಮುಖಂಡರಾದ ಪಿ.ಎನ್.ರಾಮಯ್ಯ,ಕಾರ್ಮಿಕ ಮುಖಂಡ ಕಂಬೇಗೌಡ, ರಂಗನಿರ್ದೇಶಕ ಹೊನ್ನವಳ್ಳಿ ನಟರಾಜು, ಸಿಐಟಿಯುನ ಎನ್.ಕೆ.ಸುಬ್ರಮಣ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
(Visited 1 times, 1 visits today)