ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಪ್ರಸ್ತುತ ಯೋಗ ಡಿಪ್ಲೊಮಾ ಕೋರ್ಸ್ ಇದ್ದು, ಮುಂದೆ ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್ಗಳನ್ನು ಆರಂಭಿಸುವ ಚಿಂತನೆಯಿದೆ ಎಂದು ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ತಿಳಿಸಿದರು.
ವಿಶ್ವವಿದ್ಯಾನಿಲಯ ಆಯೋಜಿಸಿದ್ದ ೨೧ ದಿನಗಳ ಯೋಗ ಸರ್ಟಿಫಿಕೇಟ್ ಕೋರ್ಸ್ನ ಸಮಾರೋಪ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದ ಅವರು, ಈ ವಿಶೇಷ ಕೋರ್ಸ್ ಅನ್ನು ನಮ್ಮ ವಿದ್ಯಾರ್ಥಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರಿಗಾಗಿಯೇ ಆರಂಭಿಸಿದ್ದೇವೆ. ಮುಂದೆ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ತೆರೆಯಲಾಗುವುದು ಎಂದರು.
ಯೋಗವು ವಯಸ್ಸಿನ ಭೇದವಿಲ್ಲದೆ ಎಲ್ಲರಿಗೂ ಅವಶ್ಯಕವಾಗಿದ್ದು, ಇದರಿಂದ ಮನುಷ್ಯ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢನಾಗಿ, ಉತ್ತಮ ಆರೋಗ್ಯವನ್ನು ಪಡೆಯುತ್ತಾನೆ ಎಂದರು.
ಯೋಗದ ಮಹತ್ವವನ್ನು ಅರ್ಥಮಾಡಿಕೊಂಡು ಲಕ್ಷಾಂತರ ಮಂದಿ ದಿನವೂ ಯೋಗವನ್ನು ತಮ್ಮ ಜೀವನಶೈಲಿಯಾಗಿ ಮಾಡುತ್ತಿದ್ದಾರೆ. ಯೋಗ ಕೇವಲ ಆರೋಗ್ಯವರ್ಧಕವೇ ಅಲ್ಲ, ಅದು ವ್ಯಕ್ತಿತ್ವವರ್ಧಕವೂ ಹೌದು. ಈ ವರ್ಷದ ಯೋಗ ಸರ್ಟಿಫಿಕೇಟ್ ಕೋರ್ಸ್ನಲ್ಲಿ ೫೪ ಅಭ್ಯರ್ಥಿಗಳು ಭಾಗವಹಿಸಿದ್ದು ಸಂತಸದ ವಿಷಯ ಎಂದು ತಿಳಿಸಿದರು.
ಕಾರ್ಯಕ್ರಮದ ಸಂಚಾಲಕ ಡಾ. ಎ. ಎಂ. ಮಂಜುನಾಥ ಮಾತನಾಡಿ, ಯೋಗ ಆಚರಣೆಯಾಗಬಾರದು, ಜೀವನದ ಭಾಗವನ್ನಾಗಿ ಮಾಡಿಕೊಳ್ಳಬೇಕು. ಪ್ರತಿದಿನ ಕೆಲ ನಿಮಿಷಗಳ ಯೋಗ ಅಭ್ಯಾಸವೂ ನಮ್ಮ ದೇಹ-ಮನಸ್ಸಿನಲ್ಲಿ ಅಪಾರ ಬದಲಾವಣೆ ತರಬಲ್ಲದು ಮತ್ತು ಇದು ಮನುಷ್ಯನಲ್ಲಿ ಧನಾತ್ಮಕ ಚಿಂತನೆಗಳನ್ನು ಹುಟ್ಟುಹಾಕುತ್ತದೆ ಎಂದರು.
ಯೋಗ ತರಬೇತುದಾರ ಎಂ.ಕೆ. ನಾಗರಾಜರಾವ್ ಮಾತನಾಡಿ, ಯೋಗ ಒಂದು ಶರೀರದ ವ್ಯಾಯಾಮವಲ್ಲ, ಇದು ಮನಸ್ಸಿನ ಶಾಂತಿ, ಆತ್ಮದ ಶುದ್ಧತೆ ಮತ್ತು ಜೀವನದ ಸಮತೋಲನವನ್ನು ತರುವ ಮಾರ್ಗ ಹಾಗೂ ಯೋಗದ ಪ್ರತಿ ಅಂಶ ನಮ್ಮಲ್ಲಿ ಶಕ್ತಿಯ ಬೆಳಕು ಹೊಳೆಯುವಂತೆ ಮಾಡುತ್ತದೆ ಎಂದರು.