ತುಮಕೂರು:
ಗಂಡು ಹೆಣ್ಣೆಂಬ ತಾರತಮ್ಯ ತೋರದೆ ಹೆಣ್ಣು ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಬೇಕೆಂದು ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಅಭಿವೃದ್ಧಿ ಸಾಮಾಜಿಕ ಸೇವಾ ಸಂಸ್ಥೆ, ಜಿಲ್ಲಾ ಬಾಲಭವನ ಸಂಘಗಳ ಸಹಯೋಗದಲ್ಲಿಂದು ನಗರದ ಸೆಂಟ್‍ಮೇರಿಸ್ ಶಾಲೆಯಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡುತ್ತಾ, ಹೆಣ್ಣು ಮಕ್ಕಳ ಲಿಂಗಾನುಪಾತ 1000ಕ್ಕೆ 943 ಇದ್ದು, ಇದನ್ನು ಸರಿದೂಗಿಸವ ಹಾಗೂ ಹೆಣ್ಣು ಮಗುವಿನ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಉಪನಿರ್ದೇಶಕ ನಟರಾಜ್ ಮಾತನಾಡಿ ಹೆಣ್ಣು ಮಕ್ಕಳ ರಕ್ಷಣೆ ಮತ್ತು ವಿದ್ಯಾಭ್ಯಾಸಕ್ಕಾಗಿ ಕೇಂದ್ರ ಸರ್ಕಾರದ ಭೇಟಿ-ಬಚಾವೋ, ಭೇಟಿ-ಪಡಾವೋ ಜೊತೆಗೆ ರಾಜ್ಯ ಸರ್ಕಾರದ ಭಾಗ್ಯಲಕ್ಷ್ಮಿ, ಸ್ತ್ರೀಶಕ್ತಿ, ಉದ್ಯೋಗಿನಿ ಮುಂತಾದ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಹೆಣ್ಣು ಮಕ್ಕಳ ಸಬಲತೆಗೆ ಆದ್ಯತೆ ನೀಡಲಾಗುತ್ತಿದೆ. ಅಲ್ಲದೆ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಶೋಷಣೆ ನಿಲ್ಲಬೇಕು. ಹೆಣ್ಣು ಸಮಾಜದ ಕಣ್ಣು. ಸಮಾಜದಲ್ಲಿ ಗಂಡು ಮಕ್ಕಳಿಗೆ ನೀಡುವ ಅಧಿಕಾರವನ್ನು ಹೆಣ್ಣು ಮಕ್ಕಳಿಗೂ ನೀಡಬೇಕು ಎಂಬ ಸಂದೇಶವನ್ನು ಸಾರ್ವಜನಿಕರಿಗೆ ನೀಡಿದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್ ಮಾತನಾಡಿ ಯಾರು ಸಹ ಬಾಲಕಾರ್ಮಿಕರಾಗದೆ ಎಲ್ಲಾ ಮಕ್ಕಳು ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಬೇಕು ಎಂದು ತಿಳಿಸಿದರು.
ಸುಮಾರು 400ಕ್ಕೂ ಹೆಚ್ಚು ಶಾಲಾ ಮಕ್ಕಳು ಸೆಂಟ್‍ಮೇರಿಸ್ ಶಾಲೆಯಿಂದ ಬಿಜಿಎಸ್ ವೃತ್ತದವರೆಗೂ ಜಾಥಾ ಕಾರ್ಯಕ್ರಮವನ್ನು ನಡೆಸಿ ಬಿಜಿಎಸ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಾಣ ಮಾಡುವ ಮೂಲಕ ಸಾರ್ವಜನಿಕರಿಗೆ ಹೆಣ್ಣು ಮಕ್ಕಳ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು.
ಜಾಥಾ ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳು ನಿಲ್ಲಲಿ-ನಿಲ್ಲಲಿ ಬಾಲ್ಯವಿವಾಹ, ಹೆಣ್ಣು ಗಂಡಿನ ನಡುವೆ ತಾರತಮ್ಯ ಬೇಡ, ಹೆಣ್ಣಿರಲಿ ಗಂಡಿರಲಿ ಮಗು ಮೊದಲು ಶಾಲೆಯಲ್ಲಿರಲಿ, ಮಕ್ಕಳೆ ಮನೆಗೆ ದೀಪ, ಮಗು ದೇಶದ ನಗು, ಶಾಲೆ ಇರುವುದು ಮಕ್ಕಳಿಗೆ ಅದರ ಹೊಣೆ ಎಲ್ಲರಿಗೆ ಎಂಬ ಘೋಷ ವಾಕ್ಯಗಳನ್ನು ಕೂಗಿದರು
ನಂತರ ಜರುಗಿದ ಅಭಿವೃದ್ಧಿ ಸಾಮಾಜಿಕ ಸೇವಾ ಸಂಸ್ಥೆ ವತಿಯಿಂದ ಜಾಗೃತಿ ಗೀತೆ ಕಾರ್ಯಕ್ರಮದಲ್ಲಿ “ಮಕ್ಕಳ ಮನೆಗೆ ದೀಪ ಎಲ್ಲರ ಮನೆಯಲ್ಲೂ ಅವರ ಬಯಕೆಗಳ ಬಲಿಕೊಡಬೇಡಿ ನಗುತಾ ಬಾಳಲು, ಬಾಳಲೆಯಂತೆ ಮಕ್ಕಳ ಮನಸ್ಸುಗಳು”ಎಂಬ ಗೀತೆ ಹಾಡಲಾಯಿತು.
ಈ ಸಂದರ್ಭದಲ್ಲಿ ತುಮಕೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಧರ್, ತುಮಕೂರು ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸತ್ಯನಾರಾಯಣ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರಮೇಶ್, ಸೆಂಟ್‍ಮೇರಿಸ್ ಶಾಲೆಯ ಪ್ರಾಶುಂಪಾಲರಾದ ರೀಟಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.