ತುಮಕೂರು:
ಜಿಲ್ಲೆಯಲ್ಲಿ ಸಿರಿಧಾನ್ಯ ಬೆಳೆ ಬೆಳೆಯುವ ರೈತರಿಗೆ 10 ಸಾವಿರ ರೂ.ಗಳವರೆಗೂ ಸಾಲ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಅಧ್ಯಕ್ಷೆ ಅಕ್ಕಮಹಾದೇವಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಂದು ನಡೆದ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಿರಿಧಾನ್ಯ ಬೆಳೆಯನ್ನು ಪ್ರೋತ್ಸಾಹಿಸಲು ಸರ್ಕಾರದಿಂದ ನೀಡುತ್ತಿರುವ ಈ ಸೌಲಭ್ಯದ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸದರಲ್ಲದೆ, ಸಣ್ಣ ರೈತರು ಹಾಗೂ ಅತೀ ಸಣ್ಣ ರೈತರಿಗಾಗಿ ಲಭ್ಯವಿರುವ ಸರ್ಕಾರದ ವಿವಿಧ ಸವಲತ್ತುಗಳನ್ನು ಪೂರ್ಣ ಪ್ರಮಾಣದಲ್ಲಿ ಅವರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಕೆಲವು ರೈತರಿಗೆ ಜೇನು ಸಾಕಾಣಿಕೆ ಹಾಗೂ ತೋಟಗಾರಿಕೆಯ ಇಲಾಖೆಯ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಸರ್ಕಾರಿ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುತ್ತಿರುವ ಬಗ್ಗೆ ಅಧಿಕಾರಿಗಳು ಖಾತ್ರಿಪಡಿಸಿಕೊಳ್ಳಬೇಕು. ರೈತರು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ತಲುಪಿಸಲು ಸೂಕ್ತ ಸಾರಿಗೆ ವ್ಯವಸ್ಥೆ ಒದಗಿಸಬೇಕು. ರೇಷ್ಮೆ ಇಲಾಖೆ ವತಿಯಿಂದ ರೈತರಿಗೆ ಎಷ್ಟು ಮೊಟ್ಟೆ ನೀಡಲಾಗಿದೆ ಹಾಗೂ ರೈತರು ಎಷ್ಟು ಗೂಡು ಉತ್ಪಾದನೆ ಮಾಡಿದ್ದಾರೆ ಎಂಬ ಬಗ್ಗೆ ಮುಂದಿನ ಸಭೆಯೊಳಗೆ ಮಾಹಿತಿ ತಿಳಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಮೀನು ಸಾಕಾಣಿಕೆಯಲ್ಲಿ ಆಸಕ್ತಿಯಿದ್ದು ಕೃಷಿ ಹೊಂಡ ಹೊಂದಿರುವ ರೈತರಿಗೆ ಮೀನುಗಾರಿಕೆ ಇಲಾಖೆ ವತಿಯಿಂದ 250 ಮೀನು ಮರಿಗಳನ್ನು ಉಚಿತವಾಗಿ ನೀಡಬೇಕು. ಪಶು ಭಾಗ್ಯ ಯೋಜನೆಯಡಿ ಅನರ್ಹ ಫಲಾನುಭವಿಗಳಿಗೆ ಸವಲತ್ತು ದೊರೆಯುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿದ್ದು, ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ರೈತರಿಗೆ ಹುಣಸೆ, ಹಲಸು ಇನ್ನಿತರೆ ಲಾಭದಾಯಕ ಸಸ್ಯಗಳನ್ನು ವಿತರಿಸುವ ಮೂಲಕ ಸಬಲರನ್ನಾಗಿ ಮಾಡಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಜಯಲಕ್ಷಮ್ಮ ಜಯರಾಮ್, ಚನ್ನಮಲ್ಲಪ್ಪ, ಜಿ. ರಾಮಾಂಜನಯ್ಯ, ಕಲ್ಲೇಶ್, ಯೋಜನಾ ನಿರ್ದೇಶಕ ವೈ. ಮಹಾಂಕಾಳಪ್ಪ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.