ತುಮಕೂರು :
ಕೊರಟಗೆರೆ ಪಟ್ಟಣದ ಊರ್ಡಿಗೆರೆ ಕ್ರಾಸ್ ಬಳಿ 47.49ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಜಿ.ಪರಮೇಶ್ವರ್ ಭೂಮಿ ಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.
ಕೊರಟಗೆರೆ ಪಟ್ಟಣ ಪರಿಮಿತಿಯಲ್ಲಿ 15ಕೋಟಿ ರೂ.ಗಳ ವೆಚ್ಚದ ಹುಣಸನಹಳ್ಳಿ-ಚಿಕ್ಕಹಳ್ಳಿ(ಎಸ್.ಹೆಚ್-3) 2.40 ಕಿ.ಮೀ. ರಸ್ತೆಗೆ ವೈಟ್-ಟಾಪಿಂಗ್, ತಾಲೂಕಿನ ವ್ಯಾಪ್ತಿಯಲ್ಲಿ 18.36ಕೋಟಿ ರೂ.ಗಳ ವೆಚ್ಚದಲ್ಲಿ ಬಾಗೇಪಲ್ಲಿ-ಹಲಗೂರು (ರಾಜ್ಯ ಹೆದ್ದಾರಿ-94ರ ಸರಪಳಿ 80.57 ಕಿ.ಮೀ ರಿಂದ 103.87 ಕಿ.ಮೀ.ವರೆಗೆ) ರಸ್ತೆ ಅಭಿವೃದ್ಧಿ ಕಾಮಗಾರಿ 10.51ಕೋಟಿ ರೂ.ಗಳ ವೆಚ್ಚದಲ್ಲಿ ಕೊರಟಗೆರೆ ತಾಲೂಕಿನ ತುಂಬಾಡಿ-ಜೋನಿಗರಹಳ್ಳಿ ಸೇರುವ(ಸರಪಳಿ 13.10 ಕಿ.ಮೀ.ವರೆಗೆ) ರಸ್ತೆ ಹಾಗೂ 18.62ಕೋಟಿ ರೂ.ಗಳ ವೆಚ್ಚದಲ್ಲಿ ಮಧುಗಿರಿ ತಾಲೂಕು ವ್ಯಾಪ್ತಿ ಕೊರಟಗೆರೆ–ಆಂಧ್ರಪ್ರದೇಶ ಗಡಿಯ ಕೊಡಗದಾಲ-ಐ.ಡಿ ಹಳ್ಳಿ ಮಾರ್ಗವಾಗಿ (ರಾಜ್ಯ ಹೆದ್ದಾರಿ-160 ಸರಪಳಿ 13 ಕಿ.ಮೀ. ರಿಂದ 41 ಕಿ.ಮೀ. ವರೆಗೆ) ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಶಂಕುಸ್ಥಾಪನೆ ನೆರವೇರಿಸಿದರು.
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಕೊರಟಗೆರೆ ಪಟ್ಟಣದಲ್ಲಿ ಹಾದು ಹೋಗುವ ಹುಣಸನಹಳ್ಳಿ-ಚಿಕ್ಕಹಳ್ಳಿ 2.5 ಕಿ.ಮೀ ಸಿಮೆಂಟ್ ರಸ್ತೆಯನ್ನು ಪಾದಾಚಾರಿ ಮಾರ್ಗ, ಚರಂಡಿಯನ್ನೊಳಗೊಂಡಂತೆ ಆಧುನಿಕ ಮಾದರಿಯಲ್ಲಿ ವಿಶೇಷ ಪ್ಯಾಕೇಜ್‍ನಡಿ ನಿರ್ಮಾಣ ಮಾಡಲಾಗುವುದು. ಕೊರಟಗೆರೆ ಪಟ್ಟಣದ ರಸ್ತೆಯನ್ನು ಈಗಾಗಲೇ ಅಗಲೀಕರಣ ಮಾಡಲಾಗಿದ್ದು, ಮತ್ತೊಂದು ಬಾರಿ ಅಗಲೀಕರಣ ಮಾಡಲಾಗುವುದೆಂದು ಜನರಲ್ಲಿ ತಪ್ಪು ಕಲ್ಪನೆಯಿದೆ. ಯಾವುದೇ ಕಾರಣಕ್ಕೂ ರಸ್ತೆ ಅಗಲೀಕರಣ ಮಾಡುವುದಿಲ್ಲ. ಜನರು ಆತಂಕಕ್ಕೊಳಗಬಾರದು ಎಂದು ಸ್ಪಷ್ಟಪಡಿಸಿದರು.
ಕೊರಟಗೆರೆ ವಿಧಾನಸಭಾ ಕ್ಷೇತ್ರದ ರಸ್ತೆ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಗೆ 200 ಕೋಟಿ ರೂ.ಗಳನ್ನು ಈಗಾಗಲೇ ಮಂಜೂರು ಮಾಡಲಾಗಿದ್ದು, ಕೆಲವೆಡೆ ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭವಾಗಿ ಪ್ರಗತಿಯಲ್ಲಿವೆ. ಉಳಿದ ಕಾಮಗಾರಿಯನ್ನು ಕೂಡಲೆ ಪ್ರಾರಂಭಿಸಲು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಹಾಗೂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‍ಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಕೊರಟಗೆರೆ ಪಟ್ಟಣದಲ್ಲಿ ಸುಮಾರು 1500 ಆಸನವುಳ್ಳ ಕಲಾಭವನ ನಿರ್ಮಾಣಕ್ಕೆ ಅನುದಾನ ಒದಗಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ. ಕಲಾ ಭವನ ನಿರ್ಮಾಣಕ್ಕೆ 20 ಕೋಟಿ ರೂ.ಗಳ ಅಂದಾಜುಪಟ್ಟಿ ತಯಾರಿಸಲಾಗಿದ್ದು, ಶೀಘ್ರದಲ್ಲೇ ಮಂಜೂರು ಮಾಡಲಾಗುವುದು. ಅಲ್ಲದೆ ಪಟ್ಟಣದಲ್ಲಿರುವ ಗೋಕುಲ ಕೆರೆಯನ್ನು ಸರ್ವೇ ಮಾಡಿ ತಂತಿಬೇಲಿ ಹಾಕಲು ಚಿಂತನೆ ನಡೆಸಲಾಗಿದೆ. ಕೆರೆ ಸುತ್ತ ವಾಕಿಂಗ್ ಪಾತ್ ವೇ ನಿರ್ಮಿಸಿ ಸುಂದರೀಕರಣಗೊಳಿಸಲು ಅಂದಾಜು ಪಟ್ಟಿ ತಯಾರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು ಪಟ್ಟಿ ಸಿದ್ದಗೊಳಿಸಿದ ನಂತರ ಹಣ ಮಂಜೂರು ಮಾಡಲಾಗುವುದು ಎಂದು ತಿಳಿಸಿದರು.
ಕೊರಟಗೆರೆ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೊರಟಗೆರೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ.83ಕ್ಕಿಂತ ಹೆಚ್ಚು ಜನರು ಕೃಷಿಯೇತರ ಚಟುವಟಿಕೆಗಳಲ್ಲಿ ಉದ್ಯೋಗಾವಕಾಶಗಳನ್ನು ಹೊಂದಿದ್ದು, ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವುದರಿಂದ ಈ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೊರಟಗೆರೆ ಪಟ್ಟಣವನ್ನು ಮೇಲ್ದರ್ಜೆಗೇರಿಸಿದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚಿನ ಅನುದಾನ ದೊರೆಯುತ್ತದೆ. ಇದರಿಂದ ಕೊರಟಗೆರೆ ಮತ್ತಷ್ಟು ಅಭಿವೃದ್ದಿ ಕಾಣಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ|| ಕೆ.ರಾಕೇಶ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭ ಕಲ್ಯಾಣ್, ಡಿವೈಎಸ್ಪಿ ಶೋಭಾರಾಣಿ, ಜಿಲ್ಲಾ ಪಂಚಾಯತ್ ಸದಸ್ಯೆ ಪ್ರೇಮಾ ಮಹಾಲಿಂಗಪ್ಪ, ತಾಲ್ಲೂಕು ಪಂಚಾಯತ್ ಅಧ್ಯಕ್ಷ ಕೆಂಪರಾಮಯ್ಯ, ಉಪಾಧ್ಯಕ್ಷೆ ನರಸಮ್ಮ, ಲೋಕೋಪಯೋಗಿ ಇಲಾಖೆ ಎಇಇ ಜಗಧೀಶ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.