ತುಮಕೂರು:
ಎಸ್‍ಎಸ್‍ಎಲ್‍ಸಿ ಫಲಿತಾಂಶ ಉತ್ತಮ ಪಡಿಸಿಕೊಳ್ಳದಿದ್ದರೆ ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಸರ್ಕಾರಿ/ ಅನುದಾನಿತ ಶಾಲೆಗಳನ್ನು ರದ್ದುಪಡಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷೆ ಡಾ|| ನವ್ಯಬಾಬು ಡಿಡಿಪಿಐಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್‍ನಲ್ಲಿಂದು ನಡೆದ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷೆವಹಿಸಿ ಮಾತನಾಡಿದ ಅವರು ಕಳೆದ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶವನ್ನು ಪರಿಶೀಲಿಸಿದರಲ್ಲದೆ ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಗಳ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬಾರದಿರುವುದನ್ನು ಗಂಭೀರವಾಗಿ ಪರಿಗಣಿಸಿ ಪ್ರಸಕ್ತ ಸಾಲಿನಲ್ಲಿ ಉತ್ತಮ ಫಲಿತಾಂಶ ಬರುವಂತೆ ಡಿಡಿಪಿಐ ಸೇರಿದಂತೆ ಶಿಕ್ಷಕರು ಪ್ರಯತ್ನಿಸಬೇಕು ಎಂದು ತಿಳಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿಯಿರುವ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗಳ ಹುದ್ದೆಗಳನ್ನು ಕೂಡಲೇ ಹೊರಗುತ್ತಿಗೆ ಆಧಾರದ ಮೇಲೆ ನಿಯಮಾನುಸಾರ ನೇಮಿಸಿಕೊಳ್ಳಲು ನಿರ್ದೇಶನ ನೀಡಿದರಲ್ಲದೆ, ಸೌರಶಕ್ತಿ ಬಿಸಿ ನೀರಿನ ಯಂತ್ರ, ಸೌರಶಕ್ತಿ ದೀಪ ಹಾಗೂ ಲೇಬರ್ ವಾರ್ಡ್‍ಗಳನ್ನು ಸುಸ್ಥಿತಿಯಲ್ಲಿಡಲು ಡಿಹೆಚ್‍ಓಗೆ ತಾಕೀತು ಮಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ(ಅಭಿವೃದ್ಧಿ)ಬಿ.ಕೃಷ್ಣಪ್ಪ, ಸ್ಥಾಯಿ ಸಮಿತಿ ಸದಸ್ಯರಾದ ಚೆನ್ನಮಲ್ಲಪ್ಪ, ಕೆಂಪಚೌಡಪ್ಪ, ಜಿ.ಹೆಚ್.ಜಗನ್ನಾಥ್, ಯಶೋಧಮ್ಮ, ವೈ.ಸಿ ಸಿದ್ದರಾಮಯ್ಯ ಉಪಸ್ಥಿತರಿದ್ದರು.