ತುಮಕೂರು :
ವಸತಿ ಯೋಜನೆಯಡಿ ಮಂಜೂರಾಗಿ ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿರುವ ಮನೆಗಳನ್ನು ಪೂರ್ಣಗೊಳಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ವಿವಿಧ ಇಲಾಖೆಗಳು ಅನುಷ್ಟಾನಗೊಳಿಸುವ ಮನೆಗಳ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ ಮಾತನಾಡಿದ ಅವರು ಜಿಲ್ಲೆಗೆ ಈಗಾಗಲೇ ರಾಜೀವ್‍ಗಾಂಧಿ ವಸತಿ ನಿಗಮದ ವತಿಯಿಂದ 26,526 ನಿವೇಶನ ರಹಿತರನ್ನು ಗುರುತಿಸಲಾಗಿದೆ. ಈ ಪೈಕಿ 1,191 ನಿವೇಶನ ರಹಿತರಿಗೆ ಹಕ್ಕುಪತ್ರ ಹಂಚಿಕೆ ಮಾಡಲು 36.50 ಎಕರೆ ಸರ್ಕಾರಿ ಜಮೀನು ಮತ್ತು 23.05 ಎಕರೆ ಖರೀದಿ ಜಮೀನು ಸೇರಿದಂತೆ ಒಟ್ಟು 59.55 ಎಕರೆ ಜಮೀನು ಲಭ್ಯವಿದೆ. ಕಾರ್ಯನಿರ್ವಾಹಕ ಅಧಿಕಾರಿಗಳು ಸಂಬಂಧಪಟ್ಟ ತಹಶೀಲ್ದಾರ್‍ಗಳೊಂದಿಗೆ ಚರ್ಚಿಸಿ ನಿವೇಶನ ರಹಿತರಿಗೆ ಹಕ್ಕುಪತ್ರ ಹಂಚಿಕೆ ಮಾಡಲು ಆದ್ಯತೆ ಮೇರೆಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಲಿಡ್ಕರ್ ನಿಗಮದ ವತಿಯಿಂದ 2018-19 ನೇ ಸಾಲಿನಲ್ಲಿ ಜಿಲ್ಲೆಗೆ 40 ಮನೆಗಳು ಮಂಜೂರಾಗಿದ್ದು, ಪ್ರತಿ ಮನೆಗೆ ಘಟಕ ವೆಚ್ಚ 2.50ಲಕ್ಷ ರೂ. ಇದ್ದು, ಅದರಲ್ಲಿ ನಿಗಮದ ವತಿಯಿಂದ 2.20ಲಕ್ಷ ರೂ.ಗಳನ್ನು ಈಗಾಗಲೇ ರಾಜೀವ್‍ಗಾಂಧಿ ವಸತಿ ನಿಗಮಕ್ಕೆ ಅನುದಾನ ನೀಡಲಾಗಿದೆ. ಉಳಿದ 30,000 ರೂ.ಗಳನ್ನು ಫಲಾನುಭವಿಗಳ ವಂತಿಗೆಯಿಂದ ಪಡೆದು ಮನೆಗಳನ್ನು ನಿರ್ಮಿಸಲು ಫಲಾನುಭವಿಗಳನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ. ರಾಜೀವ್‍ಗಾಂಧಿ ವಸತಿ ನಿಗಮದ ವತಿಯಿಂದ ಅನುಮೋದನೆಯಾಗಿರುವ ತಾಲ್ಲೂಕುವಾರು ಪಟ್ಟಿಯನ್ನು ಸಭೆಯಲ್ಲಿ ನಿಗಮದ ವ್ಯವಸ್ಥಾಪಕರು ವಿವರಿಸಿದರು. ಸಂಬಂಧಪಟ್ಟ ತಾಲ್ಲೂಕು ಪಂಚಾಯಿತಿಗಳಿಗೆ ತ್ವರಿತವಾಗಿ ಭೇಟಿ ನೀಡಿ ನಿಗಧಿತ ಅವಧಿಯೊಳಗೆ ಮನೆಗಳ ನಿರ್ಮಾಣ ಮಾಡಲು ಕ್ರಮವಹಿಸುವಂತೆ ಲಿಡ್ಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ದೇವರಾಜು ಅರಸು ವಸತಿ ಯೋಜನೆಯ ವಿಶೇಷ ವರ್ಗದಡಿಯಲ್ಲಿ ಅನುಷ್ಟಾನ ಮಾಡುವ ಇಲಾಖೆಗಳಾದ ಕೈಗಾರಿಕೆ ಮತ್ತು ವಾಣಿಜ್ಯ, ಕಾರ್ಮಿಕ, ಅಲ್ಪಸಂಖ್ಯಾತರು, ಅಂಗವಿಕಲರು, ಮೀನುಗಾರಿಕೆ, ಮಹಿಳಾ & ಮಕ್ಕಳ ಕಲ್ಯಾಣ, ಕುಷ್ಟರೋಗ ಮತ್ತು ಹೆಚ್.ಐ.ವಿ. ನಿಯಂತ್ರಣ ಹಾಗೂ ಅಂಬೇಡ್ಕರ್ ನಿಗಮದ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಗಳಲ್ಲಿ ಪ್ರಾರಂಭವಾಗದೇ ಇರುವ ಮತ್ತು ಪ್ರಗತಿಯಲ್ಲಿರುವ ಮನೆಗಳ ಬಗ್ಗೆ ಪರಿಶೀಲಿಸಿ, ಮುಂದಿನ ಸಭೆಯಲ್ಲಿ ನಿಖರವಾಗಿ ಪ್ರಗತಿ ವರದಿಗಳನ್ನು ಕಡ್ಡಾಯವಾಗಿ ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಯಿತು.
ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ವಸತಿ ಯೋಜನೆಗಳಲ್ಲಿ ಪ್ರಾರಂಭವಾಗದೇ ಇರುವ ಮನೆಗಳ ಬಗ್ಗೆ ಖುದ್ದಾಗಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲಿಸಲು ಹಾಗೂ ಪ್ರಗತಿಯಲ್ಲಿರುವ ಮನೆಗಳನ್ನು ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಲು ಸೂಕ್ತ ಕ್ರಮಕೈಗೊಳ್ಳಲು ಸೂಚಿಸಿದರು.
ಯೋಜನಾ ನಿರ್ದೇಶಕ (ಡಿಆರ್‍ಡಿಎ) ವೈ.ಮಹಾಂಕಾಳಪ್ಪ ಮಾತನಾಡಿ ವಸತಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಸಹಾಯಕ ಯೋಜನಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಮುಂತಾದ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.