ತುಮಕೂರು :
ಗ್ರಾಮಲೆಕ್ಕಾಧಿಕಾರಿಗಳ ಮುಂಬಡ್ತಿಯಲ್ಲಿ ಉಂಟಾಗುತ್ತಿರುವ ನಿರಂತರ ಅನ್ಯಾಯವನ್ನು ಸರಿಪಡಿಸಿ, ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಮತ್ತು ಗ್ರಾಮಲೆಕ್ಕಿಗರ ಜೇಷ್ಠತೆಗಳನ್ನು ಒಟ್ಟುಗೂಡಿಸಿ, ಪದನವೀಕರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಜಿಲ್ಲಾ. ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಕೆ.ಆರ್.ಮುರಳೀಧರ್ ಆಗ್ರಹ ವ್ಯಕ್ತ ಪಡಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಕೇಂದ್ರ ಸಂಘವು ರಾಜ್ಯ ಗ್ರಾಮಲೆಕ್ಕಾಧಿಕಾರಿಗಳ ಕುಂದು ಕೊರತೆ ಮತ್ತು ಇತರೆ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಸರಿಪಡಿಸುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಲ್ಲಿ ಕೋರಲಾಗಿತ್ತು. ನಂತರ ಈ ಬಗ್ಗೆ ಎರಡು ಬಾರಿ ಸಭೆ ಕರೆದು ಚರ್ಚ ಮಾಡಿ ಬೇಡಿಕೆಗಳ ಈಡೇರಿಕೆಗೆ ಆಶ್ವಾಸನೆ ನೀಡಲಾಗಿತ್ತು. ಆದರೆ ಇಲ್ಲಿವರೆಗೆ ಭರವಸೆಗಳು ಈಡೇರಿಲ್ಲ ಎಂದು ಆಕ್ರೋಷ ವ್ಯಕ್ತ ಪಡಿಸಿದರು.
ಅನ್ಯ ಇಲಾಖೆಯ ಕೆಲಸದ ಒತ್ತಡವನ್ನು ನಮ್ಮ ಇಲಾಖೆ ನೌಕರರ ಮೇಲೆ ಹೇರುತ್ತಿರುವುದನ್ನು ತಪ್ಪಿಸಬೇಕು. ರಜಾ ದಿನಗಳಲ್ಲಿ ಕೆಲಸದ ಒತ್ತಡ ಹೇರುವುದನ್ನು ನಿಷೇಧಿಸಬೇಕು. ಸಾರ್ವತ್ರಿಕ ರಜಾದಿನಗಳಲ್ಲೂ ಕೆಲಸ ಮಾಡುವಂತೆ ಒತ್ತಡ ಹೇರುತ್ತಿರುವುದರಿಂದ ಕೌಟುಂಬಿಕ ಕಲಹಗಳು ಉಂಟಾಗುತ್ತಿವೆ. ಇದರಿಂದ ಇಲಾಖಾ ಕೆಲಸ ಕಾರ್ಯ ಮಾಡಲು ಕೂಡ ಕಷ್ಟ ಸಾಧ್ಯವಾಗುತ್ತಿದೆ. ಗ್ರಾಮಲೆಕ್ಕಾಧಿಕಾರಿಗಳ ಪ್ರಯಾಣ ಭತ್ಯೆ ದರವನ್ನು 1000 ರೂಗಳಿಗೆ ಹೆಚ್ಚಿಸಲು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ತೀರ್ಮಾನಿಸಿದ್ದರು ಹಾಗೂ ರಾಜ್ಯ ಸಂಘವು 1000 ರೂಗಳಿಗೆ ಹೆಚ್ಚಿಸಲು 6ನೇ ವೇತನ ಆಯೋಗಕ್ಕೂ ಮನವಿ ಸಲ್ಲಿಸಿತ್ತು. ಆದರೆ, ಸರಕಾರ ಕೇವಲ 300 ರೂ ನಿಂದ 500 ರೂಗಳಿಗೆ ಮಾತ್ರ ಹೆಚ್ಚಿಸಿದ್ದು, ಅದನ್ನು ಪುನರ್ ಪರಿಶೀಲಿಸಿ 1000 ರೂಗಳಿಗೆ ಹೆಚ್ಚಿಸುವ ಬಗ್ಗೆ ಕ್ರಮವಹಿಸಬೇಕು ಎಂದು ಒತ್ತಾಯಸಿದರು.
ಪ್ರಧಾನ ಕಾರ್ಯದರ್ಶಿ ಎಂ.ಮಂಜುನಾಥ್ ಮಾತನಾಡಿ, ಗ್ರಾಮಲೆಕ್ಕಾಧಿಕಾರಿಗಳಿಗೆ ಜಾಬ್ ಚಾರ್ಟು ನೀಡುವ ಬಗ್ಗೆ ತೀರ್ಮಾನಿಸಿದ್ದರೂ ಸಹ ಇದುವರೆವಿಗೂ ಪರಿಷ್ಕøತ ಜಾಬ್ ಚಾರ್ಟು ನೀಡಿಲ್ಲ. ಇತ್ತೀಚೆಗೆ ಗ್ರಾಮಲೆಕ್ಕಾಧಿಕಾರಿ ಸಾಹೇಬ ಪಾಟೀಲ್‍ರು ಮರಳುದಂಧೆ ಕೋರರಿಂದ ಲಾರಿ ಹರಿದು ಮೃತರಾಗಿದ್ದು, ಅವರ ಕುಟುಂಬಕ್ಕೆ ವಿಶೇಷ ಪರಹಾರ ಮಂಜೂರು ಮಾಡಿಲ್ಲ. ಕೂಡಲೇ ವಿಶೇಷ ಪರಿಹಾರವಾಗಿ 20 ಲಕ್ಷ ರೂಪಾಯಿ ಬಿಡುಗಡೆ ಮಾಡಬೇಕು. ಗ್ರಾಮಲೆಕ್ಕಿಗರ ಹುದ್ದೆಯನ್ನು ಮೇಲ್ದರ್ಜೆಗೇರಿಸಲು ಕುರಿತು ಈಗಾಗಲೇ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಕೂಡ ಆ ಕಡತವನ್ನು ಗಾಮಲೆಕ್ಕಾಧಿಕಾರಿಗಳಿಗೆ ಯಾವುದೇ ಕಾರ್ಯಕ್ಷಮತೆ ಇಲ್ಲವೆಂದು 6ನೇ ವೇತನ ಆಯೋಗದ ಸಮಿತಿಯು ತಿರಸ್ಕರಿಸಿದೆ. ಆದ್ದರಿಂದ ಈ ಕಡತವನ್ನು ಪುನಃ ಪರಿಶೀಲನೆ ಮಾಡಬೇಕು ಎಂದರಲ್ಲದೆ, ಸಂಜೆ 6 ಗಂಟೆಯ ನಂತರವೂ ಮಹಿಳಾ ನೌಕರರೊಂದಿಗೆ ಕೆಲಸ ಮಾಡಿಸುವುದು ಸರಿಯಲ್ಲ ಇದನ್ನು ತಪ್ಪಿಸಬೇಕು. ಜೊತೆಗೆ ಕೆಲಸದ ನಿಮಿತ್ತ ಇತರೆ ಪ್ರದೇಶಗಳಿಗೆ ತೆರಳಲು ಇಲಾಖಾ ವತಿಯಿಂದ ಟಿ.ಎ / ಡಿ.ಎ ನೀಡಬೇಕು ಒತ್ತಾಯಿಸಿದ್ದಾರೆ.
ಗುಂಚಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಜಿಲ್ಲಾ ಗ್ರಾಮ ಲೆಕ್ಕಾಧಿಕಾರಿಗಳು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್ ಹಾಗೂ ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ರಾಕೇಶ್‍ಕುಮಾರ್, ತಮ್ಮ ಆಡಳಿತ ವ್ಯಾಪ್ತಿಯಲ್ಲಿ ಜರುಗಿಸಬಹುದಾದ ಕ್ರಮಗಳನ್ನು ಜರುಗಿಸಿ ಬೇಡಿಕೆಗಳನ್ನು ಈಡೇರಿಸುವಲ್ಲಿ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ಸರ್ಕಾರದ ವ್ಯಾಪ್ತಿಯಲ್ಲಿ ನಡೆಸಬಹುದಾದ ಕೆಲಸ ಕಾರ್ಯಗಳ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ನೌಕರರ ಸಂಘದ ಜಿಲ್ಲಾಧ್ಯಕ್ಷ ನರಸಿಂಹರಾಜು, ಜಿಲ್ಲಾ ಗ್ರಾಮ ಲೆಕ್ಕಿಗರ ಸಂಘದ ಖಜಾಂಚಿ ಎಸ್.ದೇವರಾಜು, ಆದಾಯ ನಿರೀಕ್ಷರು ಮಹೇಶ್, ಎಲ್ಲಾ ತಾಲ್ಲೂಕುಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು. ಪ್ರತಿಭಟನೆಯಲ್ಲಿ 350ಕ್ಕೂ ಹೆಚ್ಚು ಮಹಿಳಾ ನೌಕರರು ಭಾಗವಹಿಸಿದ್ದರು.