ತುಮಕೂರು:
ತುಮಕೂರು ತಾಲ್ಲೂಕು ಗೂಳೂರು ಹೋಬಳಿಯ ಕಾಳಿಂಗಯ್ಯನ ಪಾಳ್ಯ ಗ್ರಾಮದ ವಾಸಿಯಾದ ಲಕ್ಷ್ಮೀನರಸಮ್ಮನವರ ಸುಮಾರು 85 ಸಾವಿರ ಬೆಲೆಬಾಳುವ 70ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಪುಟ್ಟೇಗೌಡ ಎಂಬಾತ ಕಿತ್ತುಕೊಂಡು ಹೋಗಿರುವ ಆರೋಪಕ್ಕೆ 2 ವರ್ಷ ಜೈಲುವಾಸ ಮತ್ತು 10,000 ರೂ. ದಂಡ ವಿಧಿಸಿ 4ನೇ ಅಪರ ಸಿ.ಜೆ. ಮತ್ತು 5 ನೇ ಜೆ.ಎಂ.ಎಫ್.ಸಿ ನ್ಯಾಯಾಧೀಶ ವಿನೋದ್ ಬಾಲ್ ನಾಯ್ಕ ಅವರು ತೀರ್ಪು ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ:
ಆರೋಪಿ ಪುಟ್ಟೇಗೌಡ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಸಹಶಿಕ್ಷಕಿ ಲಕ್ಷ್ಮೀನರಸಮ್ಮ ಅವರನ್ನು ದಾರಿ ಮಧ್ಯೆ ಅಡ್ಡಗಟ್ಟಿ ಕಣ್ಣಿಗೆ ಖಾರದ ಪುಡಿ ಎರಚಿ ಮಾಂಗಲ್ಯಸರವನ್ನು ಕಿತ್ತುಕೊಂಡು ಹೋಗಿರುವುದು ವಿಚಾರಣೆಯಿಂದ ಸಾಬೀತಾಗಿದೆ.
ಆರೋಪಿಗೆ ವಿಧಿಸಿರುವ ದಂಡದ ಮೊತ್ತ ಕೊಡಲು ತಪ್ಪಿದರೆ 6 ತಿಂಗಳ ಸಾದಾ ಸಜೆಯನ್ನು ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಹೆಬ್ಬೂರು ಠಾಣೆಯ ತನಿಖಾಧಿಕಾರಿ ಹಾಗೂ ಕ್ಯಾತ್ಸಂದ್ರ ವೃತ್ತದ ಸಿ.ಪಿ.ಐ ಕೆ.ಆರ್. ನಾಗರಾಜ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಈ.ಡಿ. ಶ್ರೀನಿವಾಸ್ ವಾದ ಮಂಡಿಸಿದ್ದರು.